ADVERTISEMENT

ಸೋಂಕಿತರ ಕೈಗೆ ‘ಸೀಲ್‌’ ಹಾಕಲು ಸಮಯವಿಲ್ಲ! ಬಿಬಿಎಂಪಿ

ಹೋಂ ಐಸೊಲೇಷನ್‌ನಲ್ಲಿದ್ದಾರೆ 64 ಸಾವಿರ ಕೋವಿಡ್ ರೋಗಿಗಳು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 21:02 IST
Last Updated 23 ಏಪ್ರಿಲ್ 2021, 21:02 IST
   

ಬೆಂಗಳೂರು: ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕೈಗೆ ಮುದ್ರೆ ಅಥವಾ ಸೀಲ್‌ ಹಾಕಲಾಗುವುದು ಎಂದು ಬಿಬಿಎಂಪಿ ಹೇಳಿತ್ತು. ಆದರೆ, ಹಾಸಿಗೆ, ಆಕ್ಸಿಜನ್‌ ಕೊರತೆ ಹೆಚ್ಚಾಗಿದ್ದು, ಈ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಆದ್ಯತೆ ನೀಡಿರುವುದರಿಂದ ‘ಸೀಲ್‌’ ಹಾಕುವ ಕಾರ್ಯ ಚುರುಕಾಗಿಲ್ಲ.

ನಗರದಲ್ಲಿ ಏ.12ರಿಂದ 22ರ ಅವಧಿಯಲ್ಲಿ 64,091 ರೋಗಿಗಳು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕೈಗಳಿಗೆ ಸೀಲ್‌ ಹಾಕುವ ಕಾರ್ಯವನ್ನು ಎಂಜಿನಿಯರ್‌ಗಳು ನೋಡಿಕೊಳ್ಳುತ್ತಿದ್ದಾರೆ. ಆದರೆ, ಸದ್ಯ ಹಾಸಿಗೆಗಳ ಕೊರತೆ ಹೆಚ್ಚಾಗಿದೆ. ಬಹಳಷ್ಟು ಕಡೆ ಹಾಸಿಗೆಗಳೇ ಇಲ್ಲ. ಈ ಸಮಸ್ಯೆ ಪರಿಹಾರ ಮಾಡುವತ್ತ ನಾವು ಗಮನ ನೀಡುತ್ತಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಎಂ. ಶಿವಕುಮಾರ್ ಹೇಳಿದರು.

ADVERTISEMENT

‘ಸೀಲ್ ಹಾಕುವ ಕಾರ್ಯವನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಕೋವಿಡ್‌ ಕರ್ತವ್ಯಕ್ಕೆ ನಾವು ಬೂತ್‌ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಬಳಸಿಕೊಳ್ಳುತ್ತಿದ್ದೇವೆ. ಶಿಕ್ಷಕರೇ ಬಿಎಲ್‌ಒಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬಹುತೇಕ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ಬಿಎಲ್‌ಒಗಳ ತಂಡವನ್ನು ಪುನರ್‌ ಸಂಘಟಿಸುವ ಕೆಲಸ ನಡೆಯುತ್ತಿದೆ. ಶಿಕ್ಷಕರು ಬೇರೆ ಜಾಗದಿಂದ ಬರಬೇಕಾಗಿರುವುದರಿಂದ ಅವರಿಗೂ ಕಷ್ಟ ಎನಿಸಬಹುದು. ಹೀಗಾಗಿ, ಸ್ಥಳೀಯರನ್ನೇ ಈ ಕಾರ್ಯಕ್ಕೆ ಬಳಸಿಕೊಳ್ಳುವ ಉದ್ದೇಶವಿದೆ’ ಎಂದು ಬಿಬಿಎಂಪಿ ಪೂರ್ವ ವಲಯದ ಕೋವಿಡ್‌ ನೋಡಲ್‌ ಅಧಿಕಾರಿ, ಐಎಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ ಹೇಳಿದರು.

‘ಸೋಂಕಿತರ ಕೈಗೆ ಮುದ್ರೆ ಹಾಕುವ ಕಾರ್ಯವನ್ನು ನಾವು ಆರಂಭಿಸಿದ್ದೇವೆ. ಗುರುವಾರದವರೆಗೆ, ಬಿಬಿಎಂಪಿ ಪಶ್ಚಿಮ ವಲಯದಲ್ಲಿ 9,811 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ವಾರ್ಡ್‌ ವಾರು ತಂಡ ರಚಿಸಲಾಗಿದೆ. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಬಿಎಲ್‌ಒಗಳು ಹಾಗೂ ಕಂದಾಯ ಇಲಾಖೆಯಿಂದ ಒಬ್ಬರನ್ನು ಆಯ್ಕೆ ಮಾಡಿಕೊಂಡು ತಂಡಗಳನ್ನು ರಚಿಸಲಾಗಿದೆ. ಈ ತಂಡ ಸೀಲ್‌ ಹಾಕಲಿದೆ. ಜೊತೆಗೆ, ವೈದ್ಯರೊಬ್ಬರಿದ್ದು ಅವರು ಸೋಂಕಿತರ ಸೋಂಕಿನ ಲಕ್ಷಣ ಹಾಗೂ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸುತ್ತಾರೆ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಬಿ. ಶಿವಸ್ವಾಮಿ ಹೇಳಿದರು.

‘ಹೋಂ ಐಸೊಲೇಷನ್‌ನಲ್ಲಿರುವವರು ಐಸೊಲೇಷನ್‌ ಕಿಟ್‌ ಕೇಳುತ್ತಿದ್ದಾರೆ. ನಮ್ಮ ವಲಯದಲ್ಲಿ ಶಾಸಕರೊಬ್ಬರು ತಮ್ಮದೇ ಹಣದಿಂದ ಐಸೊಲೇಷನ್‌ ಕಿಟ್‌ ಪೂರೈಸಲು ಮುಂದೆ ಬಂದಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.