ADVERTISEMENT

ಅಂಬೇಡ್ಕರ್‌ ನಿಗಮದ ವಿರುದ್ಧ ಸುಳ್ಳು ಆರೋಪ: ನಿರ್ದೇಶಕಿ ಸತ್ಯಭಾಮ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 1:07 IST
Last Updated 27 ಫೆಬ್ರುವರಿ 2026, 1:07 IST
   

ಬೆಂಗಳೂರು: ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸತ್ಯಭಾಮ ಸಿ. ಸ್ಪಷ್ಟನೆ ನೀಡಿದ್ದಾರೆ.

‘ನಿಗಮದಲ್ಲಿ ಹಗರಣಗಳನ್ನು ಮಾಡಿ ಅಂಬೇಡ್ಕರ್‌ ಹೆಸರಿಗೆ ವ್ಯವಸ್ಥಾಪಕ ನಿರ್ದೇಶಕರು ಮಸಿ ಬಳಿಯುತ್ತಿದ್ದಾರೆ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸತ್ಯಭಾಮ ಅವರು ಸುದೀರ್ಘವಾದ ಸ್ಪಷ್ಟನೆ ನೀಡಿದ್ದಾರೆ. ಎಲ್ಲ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ವಿವರಣೆಯನ್ನು ಮೂರು ದಿನಗಳ ಒಳಗೆ ನೀಡುವಂತೆ ವೆಂಕಟಸ್ವಾಮಿ ಅವರಿಗೆ ಜ್ಞಾಪನ ಪತ್ರ ಕಳುಹಿಸಿದ್ದಾರೆ.

ಪ್ರಧಾನ ವ್ಯವಸ್ಥಾಪಕರಾದ ಸರಸ್ವತಿ ಅವರ ಮೇಲೆ ಮಾಡಿರುವ ಆರೋಪಗಳೂ ಸುಳ್ಳು. ಅಲ್ಲದೇ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಶ್ರೀಧರ ಮೂರ್ತಿ ಅವರನ್ನು ಪೂರ್ವಾನುಮತಿ ಪಡೆಯದೇ ತರಾತುರಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೂಡ ಆಧಾರ ರಹಿತವಾಗಿದೆ. ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ವಿಳಂಬನೀತಿ ತೋರಿದ್ದರಿಂದ ಅವರನ್ನು ನಿಯಮಾನುಸಾರವಾಗಿ ನಿಯೋಜನೆಯಿಂದ ಮುಕ್ತಗೊಳಿಸಿ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಹಣ ವರ್ಗಾವಣೆ ಮಾಡಲು ನಿರಾಕರಿಸಿದ್ದಕ್ಕಾಗಿ ಬೇರೆ ಕಾರಣ ನೀಡಿ ಲೆಕ್ಕ ಸಹಾಯಕ ಫಣಿರಾಜು ಅವರನ್ನು ಅಮಾನತು ಮಾಡಲಾಗಿದೆ ಎಂಬ ಆರೋಪವೂ ನಿರಾಧಾರ. ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವುದರಿಂದ ಲೋಕಾಯುಕ್ತದ ಬಳ್ಳಾರಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅದೇ ಕಚೇರಿಯ ಪ್ರಧಾನ ವ್ಯವಸ್ಥಾಪಕ ಜಗದೀಶ್‌ ಎಸ್‌. ಹೆಬ್ಬಳ್ಳಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿರುವುದು ಅಚ್ಚರಿಯ ಸಂಗತಿಯಲ್ಲ. ವ್ಯವಸ್ಥಾಪಕ ನಿರ್ದೇಶಕರ ಪೂರ್ವಾನುಮೋದನೆ ಪಡೆಯದೇ ಹಣಕಾಸು ವಿಭಾಗದ ಕಾರ್ಯನಿರ್ವಹಿಸಲು ಅಮಾನತಿನಲ್ಲಿರುವ ಫಣಿರಾಜ್ ಎಚ್‌. ಮತ್ತು ರೇವಣ್ಣ ಸಿದ್ದಪ್ಪ ಅವರಿಗೆ ಅನುಮತಿ ನೀಡಿದ್ದರು. ಅಮಾನತಿನಲ್ಲಿದ್ದ ಸಿಬ್ಬಂದಿ ಅನಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಲ್ಲದೇ ಕಚೇರಿಯ ಇತರ ಅಧಿಕಾರಿಗಳೂ ಇದಕ್ಕೆ ಸಾಕ್ಷಿಯಾಗಿರುವುದರಿಂದ ಅವರ ಸೇವೆಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ರೀತಿ ಹಲವು ಆರೋಪಗಳಿಗೆ ವ್ಯವಸ್ಥಾಪಕ ನಿರ್ದೇಶಕರು ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.