ADVERTISEMENT

ಬೆಂಗಳೂರು: ₹ 50 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

ಕೆಲಸಕ್ಕಿದ್ದ ಮನೆಯಲ್ಲಿ ಕಳ್ಳತನ ಎಸಗಿದ್ದ ಮಹಿಳೆ; ಉತ್ತರ ವಿಭಾಗ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 16:40 IST
Last Updated 19 ಜುಲೈ 2021, 16:40 IST
ಜಪ್ತಿ ಮಾಡಲಾದ ಚಿನ್ನಾಭರಣ, ದ್ವಿಚಕ್ರ ವಾಹನಗಳ ಜೊತೆ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಬಾಗಲಗುಂಟೆ ಪೊಲೀಸರ ತಂಡ
ಜಪ್ತಿ ಮಾಡಲಾದ ಚಿನ್ನಾಭರಣ, ದ್ವಿಚಕ್ರ ವಾಹನಗಳ ಜೊತೆ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಬಾಗಲಗುಂಟೆ ಪೊಲೀಸರ ತಂಡ   

ಬೆಂಗಳೂರು: ಉತ್ತರ ವಿಭಾಗದ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ₹ 50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

‘ಭಾರತೀಯ ವಾಯುಸೇನೆ ಕಚೇರಿ ಆವರಣದಲ್ಲಿ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಆಯಾ ಠಾಣೆ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 956 ಗ್ರಾಂ ಚಿನ್ನಾಭರಣ, 1 ಕೆ.ಜಿ 970 ಗ್ರಾಂ ಬೆಳ್ಳಿ ಸಾಮಗ್ರಿ, ದ್ವಿಚಕ್ರ ವಾಹನಗಳು, ಕ್ಯಾಮೆರಾ, ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ’ ಎಂದು ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.

ಗೋಡೆ ಜಿಗಿದು ಗಾಯಗೊಂಡಿದ್ದ ಆರೋಪಿ; ‘ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿರುವ ಭಾರತೀಯ ವಾಯುಸೇನೆ ಇ.ಟಿ.ಐ ಆವರಣಕ್ಕೆ ಗೋಡೆ ಜಿಗಿದು ನುಗ್ಗಿದ್ದ ಆರೋಪಿ ಕಳ್ಳತನಕ್ಕೆ ಯತ್ನಿಸಿದ್ದ. ತಪ್ಪಿಸಿಕೊಳ್ಳಲು ಪುನಃ ಗೋಡೆ ಜಿಗಿದು ಕೈ–ಕಾಲು ಹಾಗೂ ಬೆನ್ನಿಗೆ ಗಾಯ ಮಾಡಿಕೊಂಡಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹಲವು ಪ್ರಕರಣಗಳು ಬಯಲಾದವು’ ಎಂದೂ ಡಿಸಿಪಿ ತಿಳಿಸಿದರು.

ADVERTISEMENT

‘ಬೆಂಗಳೂರು, ಕಲಬುರ್ಗಿ, ಚಿತ್ರದುರ್ಗ, ಮೈಸೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿ ಕಳ್ಳತನ ಮಾಡಿದ್ದ. 2016ರಲ್ಲಿ ಆತನನ್ನು ಬಂಧಿಸಿದ್ದ ತಿಲಕ್‌ನಗರ ಠಾಣೆ ಪೊಲೀಸರು, ಜೈಲಿಗೆ ಕಳುಹಿಸಿದ್ದರು. ಶಿಕ್ಷೆ ಅನುಭವಿಸಿ ಹೊರಬಂದಿದ್ದ ಆತ, ಪುನಃ ಕೃತ್ಯ ಎಸಗಲಾರಂಭಿಸಿದ್ದ. ಸದ್ಯ ಆತನಿಂದ ₹ 12 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ: ‘ಅಂಗಳದಲ್ಲಿ ರಂಗೋಲಿ ಇರದ ಹಾಗೂ ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ₹ 14 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದೂ ಡಿಸಿಪಿ ತಿಳಿಸಿದರು.

‘ಅಪರಾಧ ಹಿನ್ನೆಲೆಯುಳ್ಳ ಆರೋಪಿ, 2009ರಿಂದಲೇ ಕೃತ್ಯ ಎಸಗುತ್ತಿದ್ದ. ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆತ ಜೈಲಿಗೂ ಹೋಗಿ ಬಂದಿದ್ದ. ಆರ್‌.ಟಿ. ನಗರ ಠಾಣೆ ವ್ಯಾಪ್ತಿಯ ಮನೆಯೊಂದರ ಬೀಗ ಮುರಿದು ಇತ್ತೀಚೆಗೆ ಕಳ್ಳತನ ಮಾಡಿದ್ದ’ ಎಂದೂ ಹೇಳಿದರು.

₹ 11 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ: ‘ದ್ವಿಚಕ್ರ ವಾಹನ ಕಳವು ಹಾಗೂ ಮನೆಗಳಲ್ಲಿ ಕಳ್ಳತನ ಎಸಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹ 11 ಲಕ್ಷ ಮೌಲ್ಯದ 178 ಗ್ರಾಂ ಚಿನ್ನಾಭರಣ, 770 ಗ್ರಾಂ ಬೆಳ್ಳಿ ಸಾಮಗ್ರಿ, 4 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದೂ ಡಿಸಿಪಿ ಧರ್ಮೇಂದ್ರಕುಮಾರ್ ತಿಳಿಸಿದರು.

‘ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು, ಹುಳಿಮಾವು, ಮೈಕೊಲೇಔಟ್, ಕುಮಾರಸ್ವಾಮಿ ಲೇಔಟ್, ಮಾರತ್ತಹಳ್ಳಿ. ಜಾಲಹಳ್ಳಿ ಹಾಗೂ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದೂ ಹೇಳಿದರು.

ಕೆಲಸಕ್ಕಿದ್ದ ಮನೆಯಲ್ಲಿ ಕಳವು: ‘ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಕೆಲಸಕ್ಕಿದ್ದ ಮನೆಯಲ್ಲಿ ಕಳವು ಮಾಡಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಅವರಿಂದ ₹ 8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದೂ ಡಿಸಿಪಿ ತಿಳಿಸಿದರು.

‘ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ 13 ವರ್ಷಗಳಿಂದ ಮಹಿಳೆ ಕೆಲಸ ಮಾಡುತ್ತಿದ್ದರು. ಅದರಿಂದ ಬಂದ ಹಣದಲ್ಲಿ ಸಂಸಾರ ನಡೆಸುವುದು ಕಷ್ಟವಾಗಿತ್ತು. ಆರ್ಥಿಕ ತೊಂದರೆಗೆ ಸಿಲುಕಿದ್ದ ಮಹಿಳೆ, ಕೆಲಸಕ್ಕಿದ್ದ ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಕದ್ದಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.