ADVERTISEMENT

ಅಶ್ಲೀಲ ನೃತ್ಯ: ಬಾರ್, ರೆಸ್ಟೋರೆಂಟ್‌ಗಳ ಮೇಲೆ 11 ವಿಶೇಷ ಪೊಲೀಸ್ ತಂಡಗಳ ದಾಳಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 19:54 IST
Last Updated 20 ಜೂನ್ 2025, 19:54 IST
ನಗರದ ಬಾರ್‌ ಅಂಡ್ ರೆಸ್ಟೋರೆಂಟ್ ಮೇಲೆ ಪೊಲೀಸರು ದಾಳಿ ನಡೆಸಿದರು. 
ನಗರದ ಬಾರ್‌ ಅಂಡ್ ರೆಸ್ಟೋರೆಂಟ್ ಮೇಲೆ ಪೊಲೀಸರು ದಾಳಿ ನಡೆಸಿದರು.    

ಬೆಂಗಳೂರು: ಅಶ್ಲೀಲ ನೃತ್ಯ ಪ್ರದರ್ಶನ, ಅವಧಿ ಮೀರಿ ಕಾರ್ಯಾಚರಣೆ ಆರೋಪದ ಮೇಲೆ ನಗರದ ವಿವಿಧೆಡೆ ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲೆ ಪಶ್ಚಿಮ ವಲಯದ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿದರು. 

ಉಪ್ಫಾರಪೇಟೆ, ಕಾಟನ್‌ಪೇಟೆ, ಕಲಾಸಿಪಾಳ್ಯ, ಕಬ್ಬನ್‌ಪಾರ್ಕ್ ಮತ್ತು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಸೇರಿದ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಒಟ್ಟು 11 ವಿಶೇಷ ಪೊಲೀಸ್ ತಂಡಗಳು, ಏಕಕಾಲಕ್ಕೆ ದಾಳಿ ನಡೆಸಿದವು.

‘ದಾಳಿ ವೇಳೆ, ನಿಯಮ ಉಲ್ಲಂಘಿಸಿ ಯುವತಿಯರಿಗೆ ಅಶ್ಲೀಲ ಬಟ್ಟೆ ತೊಡಿಸಿ ನೃತ್ಯ ಪ್ರದರ್ಶನ, ಅವಧಿ ಮೀರಿ ಕಾರ್ಯಾಚರಣೆ ನಡೆಸುತ್ತಿರುವುದು, ಮಹಿಳಾ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳದಿರುವುದು, ಅಡುಗೆ ಕೋಣೆಯಲ್ಲಿ ಶುಚಿತ್ವ ಪಾಲನೆ ಆಗದಿರುವುದು, ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ಕಲ್ಪಿಸದಿರುವುದು ಕಂಡು ಬಂತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಕೋಟ್ಪಾ ಕಾಯ್ದೆ, ನಿಯಮ ಉಲ್ಲಂಘಿಸಿದ ಗ್ರಾಹಕರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ನಿಯಮ ಉಲ್ಲಂಘಿಸಿದ 19 ಬಾರ್ ಆ್ಯಂಡ್‌  ರೆಸ್ಟೋರೆಂಟ್‌ಗಳ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರದಿ ನೀಡಲಾಗಿದೆ’ ಎಂದು ಹೇಳಿದ್ದಾರೆ.

ಅಲ್ಲದೆ ಆರೋಗ್ಯ ಮತ್ತು ಅಬಕಾರಿ ಇಲಾಖೆಗಳಿಗೆ ಸಂಬಂಧಪಟ್ಟ ನಿಯಮಗಳು ಉಲ್ಲಂಘನೆ ಆಗಿರುವುದು ಕಂಡು ಬಂದಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗುವುದು. ನಿಯಮ ಉಲ್ಲಂಘಿಸಿದ ವಾಣಿಜ್ಯ ಕೇಂದ್ರಗಳ ಮೇಲೆ ಸೂಕ್ತ ನಿಗಾ ಇಡಲಾಗುವುದು. ಮತ್ತೆ ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದಲ್ಲಿ ಇಲಾಖೆಯ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಅಂತಹವರ ಗುರುತು ಗೌಪ್ಯವಾಗಿ ಇಡಲಾಗುವುದು ಎಂದಿದ್ದಾರೆ. 

‘ಇನ್‍ಸ್ಪೆಕ್ಟರ್‌ಗಳ ಮೇಲೆ ಕ್ರಮ‘

ಕೆಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ದೂರುಗಳು ಬಂದ ಕಾರಣ ದಾಳಿ ಮಾಡಲಾಗಿದೆ. ದಾಳಿಯ ವೇಳೆ ನಿಯಮ ಉಲ್ಲಂಘಿಸಿರುವುದು ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಗಳಿಗೆ ಅವಕಾಶ ಕೊಡದಂತೆ ನಗರದ ಎಲ್ಲಾ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ‘ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಆಯಾ ಠಾಣೆಯ ಇನ್‌ಸ್ಪೆಕ್ಟರ್‌ಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.