ಸಮಾರಂಭದಲ್ಲಿ (ಕುಳಿತವರು ಎಡದಿಂದ) ಚಿತ್ತ ಜಿನೇಂದ್ರ ಅವರಿಗೆ ‘ಶ್ರೇಯೋಭದ್ರ ಪ್ರಶಸ್ತಿ’ ಹಾಗೂ ಪದ್ಮರಾಜ ದಂಡಾವತಿ ಅವರಿಗೆ ‘ಸುಮಾ ವಸಂತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. (ನಿಂತವರು ಎಡದಿಂದ) ಅಜಿತ್ ಮುರಗುಂಡೆ, ನೀರಜಾ ನಾಗೇಂದ್ರ ಕುಮಾರ್, ಎಲ್.ಎನ್. ಮುಕುಂದರಾಜ್, ಪದ್ಮಿನಿ ನಾಗರಾಜು ಮತ್ತು ಎಸ್.ಎ. ಅಶೋಕ್ ಕುಮಾರ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಜ್ಯದಲ್ಲಿರುವ ಒಕ್ಕಲಿಗರೆಲ್ಲರೂ ಈ ಹಿಂದೆ ಜೈನರಾಗಿದ್ದರು. ಇದಕ್ಕೆ ಹಲವು ಪುರಾವೆಗಳಿವೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಸಾಲಿಗ್ರಾಮ ಜೈನ ಮಿತ್ರ ಮಂಡಳಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 24ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪತ್ರಕರ್ತ ಪದ್ಮರಾಜ ದಂಡಾವತಿ ಅವರಿಗೆ ‘ಸುಮಾ ವಸಂತ ಪ್ರಶಸ್ತಿ’ ಹಾಗೂ ಕಲಾವಿದ ಚಿತ್ತ ಜಿನೇಂದ್ರ ಅವರಿಗೆ ‘ಶ್ರೇಯೋಭದ್ರ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಒಕ್ಕಲಿಗರು ಅಧಿಕವಾಗಿ ನೆಲಸಿರುವ ಮೈಸೂರು, ಹಾಸನ, ಕೋಲಾರ, ತುಮಕೂರು ಸೇರಿದಂತೆ ಇನ್ನೂ ಹಲವು ಕಡೆ ಜೈನ ಬಸದಿಗಳಿವೆ. ಶ್ರವಣ ಬೆಳಗೊಳದಲ್ಲಿ ಬಾಹುಬಲಿಯ ಮೂರ್ತಿಯಿದೆ. ಜೈನರ ಬಾಹುಳ್ಯ ಇಲ್ಲದೆ ಇದಿದ್ದರೆ ಇಂತಹ ಮೂರ್ತಿಗಳನ್ನು, ಬಸದಿಗಳನ್ನು ನಿರ್ಮಿಸಲು ಹೇಗೆ ಸಾಧ್ಯವಾಗುತ್ತಿತ್ತು’ ಎಂದು ಪ್ರಶ್ನಿಸಿದರು.
‘11ನೇ ಶತಮಾನಕ್ಕೂ ಮೊದಲು ಈ ನಾಡಿನ ಒಕ್ಕಲಿಗರೆಲ್ಲರೂ ಜೈನ ಸಮುದಾಯಕ್ಕೆ ಸೇರಿದ್ದರು. ಜೈನ ಸಮುದಾಯ ಪರಂಪರೆಗೆ ಸೇರಿದ ಹೊಯ್ಸಳ ದೊರೆ ಬಿಟ್ಟಿದೇವನು (ವಿಷ್ಣುವರ್ಧನ) ರಾಮಾನುಜಾಚಾರ್ಯರಿಂದ ವೈಷ್ಣವ ದೀಕ್ಷೆ ಪಡೆದು, ನಂತರ ಹಲವು ಜೈನರನ್ನು ವೈಷ್ಣವ ಪರಂಪರೆಗೆ ಮತಾಂತರಿಸಿದನು. ಹೀಗೆ ಮತಾಂತರ ಆದವರು ಈಗ ಒಕ್ಕಲಿಗರಾಗಿದ್ದಾರೆ’ ಎಂದು ಹೇಳಿದರು.
ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಕಾರ್ಯದರ್ಶಿ ಪದ್ಮಿನಿ ನಾಗರಾಜು, ‘ಸಾಲಿಗ್ರಾಮದ ಊರನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಜೈನ ಮಿತ್ರ ಮಂಡಳಿಯನ್ನು ಸ್ಥಾಪನೆ ಮಾಡಲಾಯಿತು. ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಕೂಡ ನಮ್ಮ ಊರಿನವರು ಎನ್ನಲು ಹೆಮ್ಮೆ ಆಗುತ್ತಿದೆ. ಮುಂದಿನ ವರ್ಷ ಸಂಸ್ಥೆಯ ಬೆಳ್ಳಿ ಹಬ್ಬ ಆಚರಣೆ ಮಾಡಲಾಗುವುದು’ ಎಂದರು.
ಮಂಡಳಿ ಅಧ್ಯಕ್ಷೆ ನೀರಜಾ ನಾಗೇಂದ್ರಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.