ADVERTISEMENT

ಉದ್ಯಮಿ ಒಕ್ಕಲಿಗ ಎಕ್ಸ್‌ಪೊ: 1993ರ ಸನ್ನಿವೇಶ ಮರುಕಳಿಸದಿರಲಿ –ಆದಿಚುಂಚನಗಿರಿಶ್ರೀ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 16:30 IST
Last Updated 9 ಜನವರಿ 2026, 16:30 IST
ನಗರದ ಅರಮನೆ ಮೈದಾನದಲ್ಲಿ ನಡೆದ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ–2026’ಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಿ. ಮುನಿರಾಜು, ಜಯರಾಮ್ ರಾಯಪುರ, ಎನ್‌. ಚಲುವರಾಯಸ್ವಾಮಿ, , ಜಿ.ಟಿ. ದೇವೇಗೌಡ, ಶೋಭಾ ಕರಂದ್ಲಾಜೆ,  ಶರತ್ ಬಚ್ಚೇಗೌಡ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ನಗರದ ಅರಮನೆ ಮೈದಾನದಲ್ಲಿ ನಡೆದ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ–2026’ಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಿ. ಮುನಿರಾಜು, ಜಯರಾಮ್ ರಾಯಪುರ, ಎನ್‌. ಚಲುವರಾಯಸ್ವಾಮಿ, , ಜಿ.ಟಿ. ದೇವೇಗೌಡ, ಶೋಭಾ ಕರಂದ್ಲಾಜೆ,  ಶರತ್ ಬಚ್ಚೇಗೌಡ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೂಜ್ಯ ಗುರುಗಳ (ಬಾಲಗಂಗಾಂಧರನಾಥ ಸ್ವಾಮೀಜಿ) ಕಾಲದಲ್ಲಿ 1993ರಲ್ಲಿ ಏನಾಯಿತು ಎಂದು ನಿಮಗೆ ಗೊತ್ತು. ಅಂಥ ಸನ್ನಿವೇಶ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕಾದುದು ಸಮಕಾಲೀನ ವ್ವವಸ್ಥೆಯ ಜವಾಬ್ದಾರಿ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಫಸ್ಟ್ ಸರ್ಕಲ್ ಹಮ್ಮಿಕೊಂಡಿರುವ 3 ದಿನಗಳ ‘ಉದ್ಯಮಿ ಒಕ್ಕಲಿಗ ಎಕ್ಸ್‌ಪೊ’ ಉದ್ಘಾಟನೆ ಶುಕ್ರವಾರ ನಡೆಯಿತು. 

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ‘ಸುತ್ತಮುತ್ತಲು ನಡೆಯುತ್ತಿರುವ ವಿಚಾರಗಳನ್ನು ನೋಡಿ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ, ಯಾಕೆ? ಏನು? ಎಂಬುದನ್ನು ಹೇಳಲು ಈ ಸಂದರ್ಭದಲ್ಲಿ ಹೋಗುವುದಿಲ್ಲ’ ಎಂದು ಅವರು ತಿಳಿಸಿದರು.

ADVERTISEMENT

‘93ರ ಇತಿಹಾಸ ಮತ್ತೆ ಮರುಕಳಿಸಿ ಸಮಾಜಕ್ಕೆ ಸಮಸ್ಯೆಯಾಗುವ ಸಂದರ್ಭ ಬಂದರೆ ಅದು ದೊಡ್ಡ ಹೋರಾಟಕ್ಕೆ ನಾಂದಿಯಾಗಬಹುದು. ಆಗಿನ ಸಂದರ್ಭಕ್ಕಿಂತ ಈಗ ಎಲ್ಲರೂ ಪ್ರಜ್ಞಾವಂತರಾಗಿದ್ದಾರೆ. ಸೌಲಭ್ಯಗಳು ಬಂದಿವೆ. ಹಾಗಾಗಿ ಅಂಥ ಸಂದರ್ಭ ಬಾರದಂತೆ ನೋಡಿಕೊಳ್ಳಬೇಕು’ ಎಂದರು.

ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರವು ಎಂಎಸ್‌ಎಂಇ ಅಡಿಯಲ್ಲಿ ಉದ್ಯಮ ಪೋರ್ಟಲ್‌ ತೆರೆದಿದೆ. ಈಗಾಗಲೇ ಇರುವ ಉದ್ಯಮಿಗಳು, ನವ ಉದ್ಯಮಿಗಳು ಇದರಲ್ಲಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು. 

 ಶಾಸಕರಾದ ಕೆ. ಗೋಪಾಲಯ್ಯ, ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌, ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಎಲ್‌. ಶ್ರೀನಿವಾಸ್‌, ಫಸ್ಟ್‌ ಸರ್ಕಲ್‌ ಮುಖ್ಯ ಮಾರ್ಗದರ್ಶಕ ಜಯರಾಮ್‌ ರಾಯಪುರ, ಫಸ್ಟ್‌ ಸರ್ಕಲ್‌ ಅಧ್ಯಕ್ಷ ಡಿ. ಮುನಿರಾಜು, ಸಮುದಾಯದ ಜನಪ್ರತಿನಿಧಿಗಳು, ಉದ್ಯಮಿಗಳು ಭಾಗವಹಿಸಿದ್ದರು.

1993ರಲ್ಲಿ ನಡೆದಿದ್ದೇನು?

  • ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಮೀಸಲಾತಿ ನಿಗದಿಗಾಗಿ ವೆಂಕಟಸ್ವಾಮಿ ಆಯೋಗ ರಚಿಸಿತ್ತು. ಆಯೋಗ ನೀಡಿದ್ದ ವರದಿಯನ್ನು ತಿರಸ್ಕರಿಸಿ 1988ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗವನ್ನು ರಚಿಸಲಾಗಿತ್ತು. ಚಿನ್ನಪ್ಪ ರೆಡ್ಡಿ ಆಯೋಗದ ವರದಿಯ ಶಿಫಾರಸುಗಳು ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು 1993–94ರಲ್ಲಿ ವಿರೋಧ ವ್ಯಕ್ತವಾಗಿತ್ತು. ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆದಿತ್ತು. 

  • 1992ರಲ್ಲಿ ವೀರಪ್ಪ ಮೊಯಿಲಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡಿದಾಗ ಅವರಿಗಿಂತ ಹಿರಿಯರಾದ ಎಸ್.ಎಂ. ಕೃಷ್ಣ ಅವರಿಗೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿತ್ತು. ಕೃಷ್ಣ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಆ ಸರ್ಕಾರ ಇರುವವರೆಗೂ(1994) ಭಿನ್ನಮತ ಚಟುವಟಿಕೆ ನಡೆದೇ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.