ಬೆಂಗಳೂರು: ಆನ್‌ಲೈನ್ ಆಟದ ವ್ಯಸನಿಯಾಗಿದ್ದ ಸಹೋದರಿಯ ಪುತ್ರನನ್ನು ಮಾವ ಕೊಲೆ ಮಾಡಿದ ಘಟನೆ ವಾಯವ್ಯ ಉಪ ವಿಭಾಗದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಬಡಾವಣೆಯಲ್ಲಿ ನಡೆದಿದ್ದು, ಆರೋಪಿಯು ಪೊಲೀಸರಿಗೆ ಶರಣಾಗಿದ್ದಾನೆ.
ಅಮೋಘ ಕೀರ್ತಿ (14) ಕೊಲೆಯಾದ ಬಾಲಕ. ಕೃತ್ಯ ನಡೆದ ನಾಲ್ಕು ದಿನಗಳ ಬಳಿಕ ಆರೋಪಿ ನಾಗಪ್ರಸಾದ್ (50) ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ.
‘ಶಿಲ್ಪಾ ಅವರ ಪುತ್ರ ಅಮೋಘ ಕೀರ್ತಿ ತನ್ನ ಮಾವ, ಆರೋಪಿ ನಾಗಪ್ರಸಾದ್ ಮನೆಯಲ್ಲಿ ಎಂಟು ತಿಂಗಳಿಂದ ನೆಲಸಿದ್ದ. ಮನೆಯಲ್ಲಿದ್ದಾಗ ಆನ್‌ಲೈನ್‌ನಲ್ಲಿ ‘ಫ್ರೀಫೈರ್’ ಆಟವಾಡುತ್ತಿದ್ದ. ಆನ್‌ಲೈನ್ ಆಟದ ವ್ಯಸನಿಯಾಗಿದ್ದ. ಆನ್‌ಲೈನ್‌ನಲ್ಲಿ ಆಟವಾಡದಂತೆ ನಾಗಪ್ರಸಾದ್ ಪದೇ ಪದೇ ಹೇಳುತ್ತಿದ್ದ. ಅಲ್ಲದೇ ಮಾವನ ಬಳಿ ಅಮೋಘ ಕೀರ್ತಿ ಹಣವನ್ನೂ ಕೇಳುತ್ತಿದ್ದ. ಸಹೋದರಿಯ ಪುತ್ರನ ವರ್ತನೆಯಿಂದ ಆರೋಪಿ ಬೇಸರಗೊಂಡಿದ್ದ. ಸೋಮವಾರ ಬೆಳಿಗ್ಗೆ ನಿದ್ರೆಯಲ್ಲಿದ್ದ ಬಾಲಕನ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ’ ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಯತ್ನ: ‘ಕೃತ್ಯ ಎಸಗಿದ ಬಳಿಕ ಆತಂಕಕ್ಕೆ ಒಳಗಾದ ನಾಗಪ್ರಸಾದ್ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ನಂತರ, ಆತ್ಮಹತ್ಯೆ ಆಲೋಚನೆ ಬಿಟ್ಟು ಮೆಜೆಸ್ಟಿಕ್‌ಗೆ ತೆರಳಿ ಅಲ್ಲಿಂದ ಬೇರೆ ರಾಜ್ಯಕ್ಕೆ ಪರಾರಿಯಾಗಲು ಮುಂದಾಗಿದ್ದ. ಪ್ರಯಾಣಕ್ಕೆ ಹಣವಿಲ್ಲದೇ ಮೆಜೆಸ್ಟಿಕ್‌ನಲ್ಲೇ ನಾಲ್ಕು ದಿನ ಕಾಲ ಕಳೆದಿದ್ದ. ನಂತರ, ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ’ ಎಂದು ಮೂಲಗಳು ತಿಳಿಸಿವೆ.
‘ಆನ್‌ಲೈನ್‌ನಲ್ಲಿ ಆಟವಾಡುತ್ತಿದ್ದ ಪುತ್ರನಿಗೆ ಬುದ್ಧಿಮಾತು ಹೇಳುವಂತೆ ಸಹೋದರಿ ತಿಳಿಸಿದ್ದಳು. ಪುತ್ರನನ್ನು ನನ್ನ ಮನೆಗೆ ತಂದು ಬಿಟ್ಟಿದ್ದಳು. ಎಷ್ಟು ಬುದ್ಧಿಮಾತು ಹೇಳಿದರೂ ಅಮೋಘ ಕೀರ್ತಿ ಕೇಳುತ್ತಿರಲಿಲ್ಲ. ವರ್ತನೆ ಬದಲಾವಣೆ ಮಾಡಿಕೊಂಡಿರಲಿಲ್ಲ. ಸೋಮವಾರ ಬೆಳಿಗ್ಗೆ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದೇನೆ ಎಂಬುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೊಳೆತ ಸ್ಥಿತಿಯಲ್ಲಿ ಬಾಲಕನ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.