ADVERTISEMENT

ಬಹಿರಂಗ ಚರ್ಚೆಗೆ ಬರಲು ಮೋಹನ್‌ದಾಸ್‌ ಪೈಗೆ ಬಿಜೆಪಿ ಮುಖಂಡನ ಆಹ್ವಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 19:20 IST
Last Updated 9 ಸೆಪ್ಟೆಂಬರ್ 2022, 19:20 IST
ಮೋಹನ್‌ ದಾಸ್‌ ಪೈ
ಮೋಹನ್‌ ದಾಸ್‌ ಪೈ   

ಬೆಂಗಳೂರು: ಐಟಿ ದಿಗ್ಗಜ ಮೋಹನ್‌ದಾಸ್‌ ಪೈ ಅವರಿಗೆ ಬಹಿರಂಗ ಪತ್ರ ಬರೆದಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್‌.ಆರ್‌. ರಮೇಶ್‌, ‘ಕೆರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಐಟಿ, ಬಿಟಿ ಕಂಪನಿಗಳ ವಿರುದ್ಧವೇ ‘ಸೇವ್ ಬೆಂಗಳೂರು’ ಅಭಿಯಾನ ನಡೆಸಬೇಕಿದೆ. ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಬಹುದು’ ಎಂದಿದ್ದಾರೆ.

‘ಬೆಂಗಳೂರಿನ ಪ್ರವಾಹ ಪರಿಸ್ಥಿತಿಗೆ ನಿಜವಾದ ಕಾರಣಗಳನ್ನು ತಿಳಿದಿದ್ದರೂ ಜಾಣ ಕುರುಡರಂತೆ ತಮ್ಮ ನೇತೃತ್ವದ ಕಂಪನಿಗಳ ಕರಾಳ ಮುಖಗಳನ್ನು ದುರುದ್ದೇಶಪೂರ್ವಕವಾಗಿ ಮರೆಮಾಚಿದ್ದೀರಿ. ಕೆಂಪೇಗೌಡರಿಂದ ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಮಹಾನಗರಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ಬರುವಂತಹ ನಡೆ–ನುಡಿಗಳನ್ನು ಪ್ರದರ್ಶಿಸುತ್ತಿರುವ ನಿಮಗೆ ‘ವಾಸ್ತವ ಸ್ಥಿತಿ ಮತ್ತು ಇಂದಿನ ಪ್ರವಾಹ ಪರಿಸ್ಥಿತಿಗೆ ನೈಜ ಕಾರಣಗಳನ್ನು ತಿಳಿಸುವ’ ಉದ್ದೇಶದಿಂದ ಈ ಬಹಿರಂಗ ಪತ್ರ ಬರೆಯಲಾಗಿದೆ. ತಪ್ಪು ಅಥವಾ ಆಕ್ಷೇಪಣೆ ಇದ್ದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನಿಸಲಾಗಿದೆ’ ಎಂದಿದ್ದಾರೆ.

ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಮೋಹನ್‌ ದಾಸ್‌ ಪೈ ಅವರ ವಿಳಾಸವನ್ನು ಪತ್ರದಲ್ಲಿ ನಮೂದಿಸಿದರುವ ರಮೇಶ್‌, ‘ತಮ್ಮ ನೇತೃತ್ವ ಹೊಂದಿರುವ ಇಸಿಎಲ್ಐಎ, ಒಆರ್‌ಆರ್‌ಸಿಎ ಮತ್ತು ಐಟಿಪಿಎಲ್‌ ಪ್ರದೇಶಗಳಲ್ಲಿ ರಾಜಕಾಲುವೆ ಹಾಗೂ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಪ್ರವಾಹದ ಸ್ಥಿತಿಗೆ ಕಾರಣರಾಗಿದ್ದೀರಿ. ಶೇ 50ಕ್ಕೂ ಹೆಚ್ಚು ನಿರ್ಮಿತ ಪ್ರದೇಶಗಳ ಮಾಹಿತಿ ಮರೆಮಾಚಿ ಪ್ರತಿ ವರ್ಷ ಬಿಬಿಎಂಪಿಗೆ ನೂರಾರು ಕೋಟಿ ಆಸ್ತಿ ತೆರಿಗೆ ವಂಚಿಸಲಾಗುತ್ತಿದೆ. ಅಲ್ಲದೆ, ಸಿಎಸ್‌ಆರ್‌ ನಿಧಿಯಲ್ಲಿ ಶೇ 95ಕ್ಕೂ ಹೆಚ್ಚು ಮೊತ್ತವನ್ನು ವಂಚಿಸುತ್ತಿರುವ ಐಟಿ–ಬಿಟಿ ಕಂಪನಿಗಳ ವಿರುದ್ಧವೇ ನೀವು ‘ಸೇವ್‌ ಬೆಂಗಳೂರು’ ಅಭಿಯಾನ ನಡೆಸಬೇಕು’ ಎಂದಿದ್ದಾರೆ.

ADVERTISEMENT

‘ಬೆಂಗಳೂರು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದಡಿ 79 ಟೆಕ್‌ಪಾರ್ಕ್‌ಗಳು, ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರಿಸ್‌ ಸಂಘದಡಿ 250ಕ್ಕೂ ಹೆಚ್ಚು ಐಟಿ–ಬಿಟಿ ಕಂಪನಿಗಳು, ಮಹದೇವಪುರದ ಐಟಿಪಿಎಲ್‌ನಲ್ಲಿ 100ಕ್ಕೂ ಹೆಚ್ಚು ಐಟಿ ಕಂಪನಿಗಳು ತಾವು ನಿರ್ಮಾಣ ಮಾಡಿರುವ ತಮ್ಮ ಸಂಸ್ಥೆಗಳ ಕಟ್ಟಡಗಳಿಗಾಗಿ ರಾಜಕಾಲುವೆ, ಬಫರ್‌ ಝೋನ್‌ಗಳನ್ನು ಬಹುತೇಕ ಒತ್ತುವರಿ ಮಾಡಿಕೊಂಡಿರುವುದನ್ನು ನೀವು ಮರೆತಂತಿದೆ. ರಾಜಕಾಲುವೆಗಳ ಬೃಹತ್‌ ಮಳೆನೀರುಗಾಲುವೆ, ದ್ವಿತೀಯ ಹಂತದ ಕಾಲುವೆಗಳ ಅಗಲವನ್ನು ಕಡಿತಗೊಳಿಸಿದ್ದೀರಿ. ಮಾರ್ಗಾಂತರ ಮಾಡಿರುವುದು ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ’ ಎಂದಿದ್ದಾರೆ.

‘ಐಟಿ–ಬಿಟಿ ಪಾರ್ಕ್‌ಗಳ 90.85 ಲಕ್ಷ ಚದರ ಅಡಿ ನಿರ್ಮಿತ ಪ್ರದೇಶದಲ್ಲಿ ಶೇ 25ರಷ್ಟನ್ನು ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ಮಾಡಿಕೊಂಡೆ ಕಟ್ಟಡ ನಿರ್ಮಿಸಲಾಗಿದೆ. ಆರು ಲಕ್ಷ ಚದರ ಅಡಿ ವಿಸ್ತೀರ್ಣದ ರಾಜಕಾಲುವೆ ಪ್ರದೇಶವನ್ನು 79 ಟೆಕ್‌ ಪಾರ್ಕ್‌ಗಳು ಮಾಡಿವೆ. ಈ ಬಗ್ಗೆ ನ್ಯಾಯಾಲಯಗಳಲ್ಲಿ ಕ್ರಿಮಿನಲ್‌ ಪ್ರಕರಣ ಇರುವುದನ್ನು ನೀವು ಮರೆತಂತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.