ಬೆಂಗಳೂರು: ನಗರದಲ್ಲಿ ಮಳೆಯಿಂದ ಆಗಿರುವ ಅನಾಹುತದ ಪರಿಹಾರ ಕಾರ್ಯಕ್ಕೆ ತಕ್ಷಣವೇ ₹1,000 ಕೋಟಿ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಆಗ್ರಹಿಸಿದ್ದಾರೆ.
ಭಾನುವಾರ ರಾತ್ರಿ ನಗರದಲ್ಲಿ 103 ರಿಂದ 130 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ. ಇದರಿಂದ ನಗರದಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಆದ್ದರಿಂದ ತ್ವರಿತಗತಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಂಗಾರು ಪೂರ್ವದ ಒಂದೇ ಒಂದು ಮಳೆ ಕಾಂಗ್ರೆಸ್ ಸರ್ಕಾರದ ‘ಬ್ರ್ಯಾಂಡ್ ಬೆಂಗಳೂರಿನ’ ನಿಜ ಬಣ್ಣ ಬಯಲು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಾಧನಾ ಸಮಾವೇಶದಲ್ಲಿ ಮುಳುಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಅನೇಕ ಬಡಾವಣೆಗಳು ಜಲಾವೃತವಾಗಿವೆ. ನೂರಾರು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿವೆ. ಇಡೀ ರಾತ್ರಿ ಜನರು ಜಾಗರಣೆ ಮಾಡುವಂತಾಗಿದೆ. ಅವರಿಗೆ ಊಟದ ವ್ಯವಸ್ಥೆ ಇಲ್ಲ. ಇಷ್ಟಾದರೂ ಬಿಬಿಎಂಪಿ ಜನರ ನೆರವಿಗೆ ಮುಂದಾಗಿಲ್ಲ. ಬೆಂಗಳೂರಿನ ಮಾನ ವಿಶ್ವಮಟ್ಟದಲ್ಲಿ ಹರಾಜಾಗಿದೆ ಎಂದು ಅಶೋಕ ಟೀಕಿಸಿದ್ದಾರೆ.
ಹೆಬ್ಬಾಳ, ಕೋರಮಂಗಲ ಮತ್ತು ವೃಷಭಾವತಿ ಕಣಿವೆಯಲ್ಲಿ ಪ್ರವಾಹ ಬಂದಿದೆ. ಇನ್ನೂ ಮೂರು ನಾಲ್ಕು ದಿನ ಭಾರಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಕ್ಷಣ ತುರ್ತು ಪರಿಹಾರ ಕಾರ್ಯಪಡೆ ರಚಿಸಿ, ಸಹಾಯವಾಣಿ ಆರಂಭಿಸಬೇಕು. ನೀರು ನುಗ್ಗಿರುವ ಮನೆಗಳಿಗೆ ಕನಿಷ್ಠ ₹1 ಲಕ್ಷ ಪರಿಹಾರ ವಿತರಿಸಬೇಕು. ಆ ಮನೆಯವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿ ಎರಡು ತಿಂಗಳಿಗೆ ಆಗುವಷ್ಟು ಪರಿಹಾರ ವಿತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದಿನ ವರ್ಷದ ಲೋಪಗಳಿಂದ ಪಾಠ ಕಲಿಯದ ಸರ್ಕಾರದ ಬೇಜವಾಬ್ದಾರಿತನದಿಂದ ನಗರದಲ್ಲಿ ಅನಾಹುತ ಸಂಭವಿಸಿದೆ. ಮುಂಚಿತವಾಗಿ ಮೋರಿ, ಚರಂಡಿ, ರಾಜಕಾಲುವೆಗಳಲ್ಲಿ ಹೂಳು ತೆಗೆಸುವ ಕೆಲಸ ಮಾಡಬೇಕಿತ್ತು. ನಗರದ ಅನೇಕ ಕಡೆಗಳಲ್ಲಿ ವೈಟ್‌ಟಾಪಿಂಗ್ ಮತ್ತು ರಿಪೇರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿನ ಅವಶೇಷಗಳನ್ನು ತೆರವು ಮಾಡದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಇವತ್ತು ವಾಟರ್ ಬೆಂಗಳೂರು ಆಗಿದೆ. ಸ್ವಲ್ಪ ಮಳೆಯಾದರೂ ಬೆಂಗಳೂರು ಮಹಾನಗರ ನೀರಿನಲ್ಲಿ ಮುಳುಗುವಂತಾಗಿದೆ.– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.