ADVERTISEMENT

ಹೆಬ್ಬಾಳದಲ್ಲಿ ‘ಸಾವಯವ–ಸಿರಿಧಾನ್ಯ ಹಬ್’: ಜ.23ರಂದು ಭೂಮಿಪೂಜೆ

ಗಾಣಧಾಳು ಶ್ರೀಕಂಠ
Published 6 ಜನವರಿ 2025, 23:40 IST
Last Updated 6 ಜನವರಿ 2025, 23:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳ ಉತ್ಪಾದಕರು, ಮಾರುಕಟ್ಟೆದಾರರು, ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಕೃಷಿ ಇಲಾಖೆಯು ಹೆಬ್ಬಾಳದಲ್ಲಿ ‘ಸಾವಯವ –ಸಿರಿಧಾನ್ಯ ಹಬ್‌’ ನಿರ್ಮಾಣ ಮಾಡುತ್ತಿದೆ.

ಹೆಬ್ಬಾಳದಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದ ಎದುರಿನ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಈ ಹಬ್ ತಲೆ ಎತ್ತಲಿದೆ. ಎಲ್ಲವೂ ಯೋಜನೆ ಪ್ರಕಾರ ಸಾಗಿದರೆ, ಮುಂದಿನ ವರ್ಷ ಈ ಕೇಂದ್ರ ಬಳಕೆಗೆ ಸಿದ್ಧವಾಗಲಿದೆ.

ಕೇಂದ್ರ ಸರ್ಕಾರದ ₹12 ಕೋಟಿ, ರಾಜ್ಯ ಸರ್ಕಾರದ ₹8 ಕೋಟಿ ಅನುದಾನ ಸೇರಿ ಒಟ್ಟು ₹20 ಕೋಟಿ ವೆಚ್ಚದಲ್ಲಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ(ಆರ್‌ಕೆವಿವೈ) ಈ ಹಬ್‌ ನಿರ್ಮಾಣವಾಗುತ್ತಿದೆ. 18 ತಿಂಗಳಲ್ಲಿ ‘ಹಬ್‌’ ನಿರ್ಮಾಣ ಪೂರ್ಣಗೊಳಿಸಲು ಸಮಯ ನಿಗದಿಯಾಗಿದೆ.

ADVERTISEMENT

ಸಿರಿಧಾನ್ಯ ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ನವೋದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ರೈತ ಉತ್ಪಾದಕ ಕಂಪನಿಗಳು(ಎಫ್‌ಪಿಸಿ), ಸ್ವಸಹಾಯ ಸಂಘಗಳು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಕೆಲ ಎಫ್‌ಪಿಒಗಳು ವಿದೇಶಗಳಿಗೂ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ.

‘ಉತ್ಪಾದಕರು, ಮಾರುಕಟ್ಟೆದಾರರು ಹಾಗೂ ಗ್ರಾಹಕರ ಮಧ್ಯೆ ಸಂಪರ್ಕ ಬೆಸೆದು ಮಾರುಕಟ್ಟೆಯನ್ನು ವಿಸ್ತರಿಸುವುದು ಹಾಗೂ ಸಿರಿಧಾನ್ಯ–ಸಾವಯವ ಉತ್ಪನ್ನಗಳ ಆರೋಗ್ಯದ ಪ್ರಯೋಜನ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸುವುದಕ್ಕಾಗಿ ‘ಸಿರಿಧಾನ್ಯ–ಸಾವಯವ ಹಬ್’ ನಿರ್ಮಿಸಲಾಗುತ್ತಿದೆ. ಈವರೆಗೆ ನಡೆಸಿರುವ ಸಾವಯವ ಮತ್ತು ಸಿರಿ ಧಾನ್ಯಗಳ ಮೇಳಗಳಿಗೆ ವ್ಯಕ್ತವಾದ ಪ್ರತಿಕ್ರಿಯೆ ಆಧರಿಸಿ ‘ಹಬ್‌’ ನಿರ್ಮಾಣ ಯೋಜನೆ ರೂಪಿಸಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಹಬ್‌’ನಲ್ಲಿ ಏನೇನಿರುತ್ತದೆ?

ಈ ಹಬ್‌ನಲ್ಲಿ ಹಳ್ಳಿಯ ಪರಿಸರವನ್ನು ಸೃಷ್ಟಿಸಲಾಗುತ್ತದೆ. ಇಲ್ಲಿ ಸಾವಯವ, ಸಿರಿಧಾನ್ಯಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮಾರಾಟ ಮಳಿಗೆಗಳಿರುತ್ತವೆ. ಪ್ರತ್ಯೇಕ ಆಹಾರ ಮಳಿಗೆಗಳು (ಹೋಟೆಲ್‌)ಗಳಿರುತ್ತವೆ. ಸಿರಿಧಾನ್ಯಗಳ ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸಂಗ್ರಹಣೆಯ ಸೌಲಭ್ಯವಿರುತ್ತದೆ. ಗ್ರಾಹಕರಿಗೆ ಅರಿವು ಮೂಡಿಸುವ ವಸ್ತು ಪ್ರದರ್ಶನ ಕೇಂದ್ರ, ಸಮ್ಮೇಳನ ಸಭಾಂಗಣ, ಪ್ರದರ್ಶನ ಅಂಗಳ, ಬಿ2ಬಿ ಸಭಾಂಗಣ, ರಫ್ತು ಕುರಿತು ಮಾಹಿತಿ ನೀಡುವ ಕೇಂದ್ರಗಳಿರುತ್ತವೆ.

‘ಸಿರಿಧಾನ್ಯ, ಸಾವಯವ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದ ಕುರಿತು ತರಬೇತಿ ನೀಡಲು ಕೃಷಿ ಇಲಾಖೆ ಪ್ರತ್ಯೇಕ ಕೇಂದ್ರವನ್ನು ತೆರೆಯಲಿದೆ. ಸಿರಿಧಾನ್ಯಗಳನ್ನು ಹೆಚ್ಚು ಗ್ರಾಹಕರ ಬಳಿ ಕೊಂಡೊಯ್ಯವಂತಹ ಆಸಕ್ತ ಸಂಸ್ಥೆ/ಕಂಪನಿಗಳನ್ನು  ಮಳಿಗೆಗಳನ್ನು ತೆರೆಯಲು ಆಹ್ವಾನಿಸಲಾಗುತ್ತದೆ. ಟೆಂಡರ್ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ. ಇಲಾಖೆ ನೀಡುವ ಪರಿಕಲ್ಪನೆಯಲ್ಲೇ ಕಂಪನಿಗಳು ಮಳಿಗೆ ನಿರ್ಮಿಸಿಕೊಳ್ಳಬೇಕು’ ಎಂದು ಕೃಷಿ ಆಯುಕ್ತ ವೈ.ಎಸ್.ಪಾಟೀಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಾರಿಗೆಲ್ಲ ಅನುಕೂಲ

‘ಹಬ್‌’ನಲ್ಲಿ ಗ್ರಾಹಕರಿಗೆ ಸಾವಯವ ಉತ್ಪನ್ನಗಳು ಮತ್ತು ಸಿರಿ ಧಾನ್ಯಗಳ ಕುರಿತ ಮಾಹಿತಿ ಲಭ್ಯವಾಗುತ್ತದೆ. ಮೌಲ್ಯವರ್ಧಿತ ಉತ್ಪನ್ನಗಳು, ರೆಡಿ ಟು ಕುಕ್ ಮತ್ತು ರೆಡಿ ಟು ಈಟ್ ಉತ್ಪನ್ನಗಳು ಖರೀದಿಗೆ ಲಭ್ಯವಾಗುತ್ತವೆ. ಸಿರಿಧಾನ್ಯದ ಆಹಾರದ ರುಚಿ ಸವಿಯಬಹುದು. ಅಡುಗೆ ತಯಾರಿಯ ಬಗ್ಗೆಯೂ ಮಾಹಿತಿ ಪಡೆಯಬಹುದು.  

ಬಹುಮುಖ್ಯವಾಗಿ ಕೃಷಿಕರಿಗೆ, ಎಫ್‌ಫಿಒ/ಎಫ್‌ಪಿಸಿ, ನವೋದ್ಯಮಗಳು ಮತ್ತು ಸಾವಯವ ಮತ್ತು ಸಿರಿ ಧಾನ್ಯ ಪದಾರ್ಥಗಳ ಉತ್ಪಾದನೆ/ಸಂಸ್ಕರಣೆ/ಮಾರಾಟದಲ್ಲಿ ತೊಡಗಿರುವ ಎಲ್ಲ ಪಾಲುದಾರರಿಗೆ ಇಲ್ಲಿ ಅಗತ್ಯ ಮಾಹಿತಿಗಳು ಲಭ್ಯವಾಗುತ್ತವೆ.

ಎನ್‌.ಚಲುವರಾಯಸ್ವಾಮಿ 
ಜನವರಿ 23ರಿಂದ ಅಂತರರಾಷ್ಟ್ರೀಯ ಸಾವಯವ– ಸಿರಿ ಧಾನ್ಯ ಮೇಳ ಆರಂಭವಾಗಲಿದೆ. ಅದೇ ದಿನ ‘ಸಾವಯವ–ಸಿರಿ ಧಾನ್ಯ ಹಬ್‌’ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ.
– ಎನ್‌. ಚಲುವರಾಯಸ್ವಾಮಿ ಕೃಷಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.