ADVERTISEMENT

ಬೆಂಗಳೂರು: ರೇಸ್‌ ಕೋರ್ಸ್, ಗಾಲ್ಫ್‌ ಕ್ಲಬ್‌ ಸ್ಥಳಾಂತರಕ್ಕೆ ಸೂಚನೆ

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ l ಕಬ್ಬನ್ ಪಾರ್ಕ್‌ ಮಾದರಿಯಲ್ಲಿ ಉದ್ಯಾನ ಅಭಿವೃದ್ಧಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 20:00 IST
Last Updated 14 ಜೂನ್ 2022, 20:00 IST
ಗಾಲ್ಫ್‌ ಕ್ಲಬ್‌
ಗಾಲ್ಫ್‌ ಕ್ಲಬ್‌   

ಬೆಂಗಳೂರು: ಬೆಂಗಳೂರು ರೇಸ್‌ ಕೋರ್ಸ್‌ ಮತ್ತು ಗಾಲ್ಫ್‌ ಕ್ಲಬ್‌ಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಬೇಕು ರೇಸ್‌ಕೋರ್ಸ್‌ ಜಾಗದಲ್ಲಿ ಕಬ್ಬನ್‌ಪಾರ್ಕ್‌ ಮಾದರಿಯ ಉದ್ಯಾನ ವನ ಹಾಗೂ ಗಾಲ್ಫ್‌ ಕ್ಲಬ್‌ ಪ್ರದೇಶದಲ್ಲಿ ಮರಗಳ ಉದ್ಯಾನ ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸರ್ಕಾರಕ್ಕೆ ಸೂಚಿಸಿದೆ.

ಸಮಿತಿಯ ಅಧ್ಯಕ್ಷ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ‘ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯಿಂದ ಆದಷ್ಟು ಬೇಗ ಸ್ಥಳಾಂತರದ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಲಾಯಿತು.

ಬೆಂಗಳೂರು ಟರ್ಫ್‌ ಕ್ಲಬ್‌ಗೆ ಕುದುರೆ ರೇಸ್‌ ನಡೆಸಲು ನೀಡಿದ್ದ ಲೀಸ್‌ ಅವಧಿ ಮುಗಿದ ತಕ್ಷಣ ನಗರದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ 2009ರಲ್ಲಿ ರಾಜ್ಯ ಸರ್ಕಾರ ನೋಟಿಸ್‌ ನೀಡಿತ್ತು. ಟರ್ಫ್‌ ಕ್ಲಬ್‌ ನೋಟಿಸ್‌ ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಯಿತು. ಅಲ್ಲಿ ಸರ್ಕಾರದ ಪರವಾಗಿ ತೀರ್ಪು ಬಂದಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದಾಗ ಅಂದಿನ ಅಡ್ವೊಕೇಟ್‌ ಜನರಲ್‌ ಅವರು ಅಂತಿಮ ತೀರ್ಮಾನ ಆಗುವವರೆಗೆ ಯಥಾಸ್ಥಿತಿ ಕಾಪಾಡಲು ಮನವಿ ಮಾಡಿದರು. ಕೋರ್ಟ್‌ ಕೂಡಾ ಅಂತಿಮ ತೀರ್ಮಾನ ಆಗುವವರೆಗೆ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿತು.

ADVERTISEMENT

ಇದೆಲ್ಲಾ ಆಗಿ ಬಹಳ ವರ್ಷ ಕಳೆದರೂ ಸರ್ಕಾರ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಅಲ್ಲದೆ, ಸರ್ಕಾರಕ್ಕೆ ಪಾವತಿಸುತ್ತಿರುವ ಬಾಡಿಗೆ ವರ್ಷಕ್ಕೆ ₹24 ಲಕ್ಷ ಮಾತ್ರ. ಇದು ಅತಿ ಕಡಿಮೆ ಬಾಡಿಗೆಯಾಗಿದ್ದು, ಈಗಿನ ದಿನಮಾನಕ್ಕೆ ಅನುಗುಣವಾಗಿ ಬಾಡಿಗೆ ಪಡೆದರೆ ಕಳೆದ 10 ವರ್ಷಗಳಿಗೆ ₹85 ಕೋಟಿ ನೀಡಬೇಕಾಗುತ್ತದೆ. ಸರ್ಕಾರಕ್ಕೆ ನೂರಾರು ಕೋಟಿ ನಷ್ಟವಾಗಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ಕುದುರೆ ರೇಸ್‌ ಕ್ರೀಡೆ ಅಲ್ಲ, ಜೂಜು ಆಗಿರುವುದರಿಂದ, ಈಗಿರುವ ಸ್ಥಳದಲ್ಲಿ ಮುಂದುವರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಜೂಜಿಗೆ ಸರ್ಕಾರ ಪ್ರೊತ್ಸಾಹ ನೀಡಬಾರದು. ಇದನ್ನು ರದ್ದು ಮಾಡಬೇಕು ಎನ್ನುವುದು ಸರಿಯಲ್ಲ. ನಗರದ ಹೊರ ವಲಯದಲ್ಲಿ ನಡೆಸುವುದು ಸೂಕ್ತ. ಅವರಿಗೆ ಎಲ್ಲಿ ಜಾಗ ಕೊಡಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು. ಹೃದಯ ಭಾಗದಲ್ಲಿರುವ ಈ ಜಾಗದಲ್ಲಿ ಕಬ್ಬನ್‌ ಪಾರ್ಕ್‌ ಅಥವಾ ಲಾಲ್‌ಬಾಗ್ ಮಾದರಿಯಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ಗಾಲ್ಫ್‌ ಕ್ಲಬ್‌ ಜಾಗದಲ್ಲಿ ‘ಟ್ರೀ ಪಾರ್ಕ್‌’

ಗಾಲ್ಫ್‌ ಕ್ಲಬ್‌ ಲೀಸ್‌ ಅವಧಿ 2021ರಲ್ಲೇ ಮುಗಿದಿದ್ದು, ಅದನ್ನು ಸ್ಥಳಾಂತರ ಮಾಡಬೇಕು. ಬೆರಳೆಣಿಕೆಯ ರಾಜಕಾರಣಿಗಳು, ಅಧಿಕಾರಿಗಳ ಮನರಂಜನೆಯ ಆಟಕ್ಕಾಗಿ ಇಷ್ಟು ದೊಡ್ಡ ಜಾಗ ಬಿಟ್ಟುಕೊಡುವುದು ಸರಿಯಲ್ಲ. ಇಲ್ಲಿ ಟ್ರೀ ಪಾರ್ಕ್‌ (ಮರಗಳ ಉದ್ಯಾನ) ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ಅಧಿಕಾರಿಗಳಿಗೆ ನೀಡಲಾಯಿತು.

ಗಾಲ್ಫ್‌ ಕ್ಲಬ್‌ಗೆ ಬರುತ್ತಿರುವ ಬಾಡಿಗೆ ಅತಿ ಕಡಿಮೆ ಇದ್ದು, ಸೂಕ್ತ ಬಾಡಿಗೆಯನ್ನು ಪಡೆಯುತ್ತಿದ್ದರೆ ₹302 ಕೋಟಿ ಬಾಡಿಗೆ ವಸೂಲಿ ಮಾಡಬೇಕಾಗಿತ್ತು. ಸರ್ಕಾರಕ್ಕೆ ಆದಾಯದಲ್ಲೂ ನಷ್ಟವಾಗಿದೆ ಆದ್ದರಿಂದ ಗುತ್ತಿಗೆಯನ್ನು ನವೀಕರಿಸದೇ ಸ್ಥಳಾಂತರ ಮಾಡಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.