ADVERTISEMENT

ಸುಳಿವು ನೀಡಲು ₹10 ಲಕ್ಷ ಪಡೆದಿದ್ದಕ್ಕೆ ‍ಪಾಗಲ್‌ ಸೀನನ ಕೊಲೆ

ಎಚ್‌ಎಎಲ್‌ ಪೊಲೀಸರಿಂದ 9 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 14:16 IST
Last Updated 15 ಜೂನ್ 2020, 14:16 IST
   

ಬೆಂಗಳೂರು: ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ಪಾಗಲ್ ಸೀನಕೊಲೆ ಪ್ರಕರಣದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿಯ ಸಂತೋಷ್ ಅಲಿಯಾಸ್ ಬ್ಯಾಟಿಂಗ್ (26), ಸುರೇಶ್ (21), ಲೋಕೇಶ್ (23), ಬಾಲಸುಬ್ರಹ್ಮಣ್ಯಂ (29), ಸಾರಕ್ಕಿ ಸಿಗ್ನಲ್‌ನ ವಿಜಯ್ (24), ಕೋಣನಕುಂಟೆ ಕ್ರಾಸ್ ಬೀರೇಶ್ವರ ನಗರದ ಪೀಟರ್ ಕುಮಾರ್ (27), ಕುಮಾರಸ್ವಾಮಿ ಲೇಔಟ್‌ನ ನವಾಜ್ (22), ದಿಲೀಪ್ (22) ಹಾಗೂ ಎಚ್‌ಎಎಲ್‌ ಶಾಸ್ತ್ರಿನಗರದ ನ್ಯಾಮತ್ (27) ಬಂಧಿತರು.

‘ಶಾಸ್ತ್ರಿನಗರದಲ್ಲಿರುವ ಸೀನನ ಮನೆಗೆ ಜೂನ್ 7ರಂದು ಬೆಳಿಗ್ಗೆ 6.15ರ ಸುಮಾರಿಗೆ ನುಗ್ಗಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ನಂತರ ಬೈಕ್ ಹಾಗೂ ಆಟೊದಲ್ಲಿಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

ಸ್ನೇಹಿತರೇ ವೈರಿಗಳಾದರು: ‘ಜೆ.ಪಿ. ನಗರ ಠಾಣೆ ರೌಡಿಶೀಟರ್ ಆಗಿದ್ದ ಪಾಗಲ್ ಸೀನ ಹಾಗೂ ಆರೋಪಿ ಸಂತೋಷ, ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇಬ್ಬರು ಒಟ್ಟಿಗೆ ಗ್ಯಾಂಗ್‌ ಕಟ್ಟಿಕೊಂಡು ಕಳ್ಳತನ ಹಾಗೂ ಹಲವು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಸೀನ, ಎರಡು ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಬಿಡುಗಡೆಯಾಗಿ ಮನೆಗೆ ಬಂದಿದ್ದ’ ಎಂದು ಪೊಲೀಸರು ಹೇಳಿದರು.

‘ಸಂತೋಷ್‌ನ ಸ್ನೇಹಿತನಾಗಿದ್ದ ಶ್ರೀನಿವಾಸ್ ಅಲಿಯಾಸ್ ಸ್ಟ್ಯಾಂಡ್ ಕುಟ್ಟಿಯನ್ನು ರೌಡಿ ಶೀಟರ್ ಬಳ್ಳಾರಿ ಶಿವ ಮತ್ತು ಇತರರು ಕೊಲೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಬಳ್ಳಾರಿ ಶಿವನನ್ನು ಕೊಲೆ ಮಾಡಲು ಸಂತೋಷ್ ಹೊಂಚು ಹಾಕುತ್ತಿದ್ದ. ಅದು ಗೊತ್ತಾಗುತ್ತಿದ್ಧಂತೆ ಶಿವ ಹಾಗೂ ಆತನ ಸಹೋದರ ಪುನೀತ್, ಸಂತೋಷ್‌ನನ್ನೇ ಕೊಲ್ಲಲು ಸಂಚು ರೂಪಿಸಿದ್ದರು.’

‘ಪಾಗಲ್‌ ಸೀನನನ್ನು ಸಂಪರ್ಕಿಸಿದ್ದ ಪುನೀತ್, ಸಂತೋಷ್‌ನ ಬಗ್ಗೆ ಸುಳಿವು ನೀಡಿದರೆ ₹10 ಲಕ್ಷ ಕೊಡುವುದಾಗಿ ಹೇಳಿದ್ದ. ಅದಕ್ಕೆ ಸೀನನೂ ಒಪ್ಪಿಕೊಂಡಿದ್ದ. ಅದು ಗೊತ್ತಾಗುತ್ತಿದ್ದಂತೆ ಸಂತೋಷ್‌ ಗ್ಯಾಂಗ್‌ ಕಟ್ಟಿಕೊಂಡು ಪಾಗಲ್ ಸೀನನನ್ನು ಕೊಂದು ಹಾಕಿದ್ದ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.