
ಬೆಂಗಳೂರು: ‘ರೋಗಿಗಳ ನೋವು ನಿರ್ವಹಣೆಗೆ ಸಹಕಾರಿಯಾದ ಉಪಶಮನ ಆರೈಕೆಗೆ ಹೆಚ್ಚಿನ ಬೇಡಿಕೆಯಿದ್ದು, ಈ ಆರೈಕೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಔಷಧ ಮತ್ತು ವೈದ್ಯಕೀಯ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಕ್ಯಾಮರಾ ವಾನ್ ಬ್ರೀಮನ್ ಅಭಿಪ್ರಾಯಪಟ್ಟರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ಯಾನ್ಸರ್ ಹಾಗೂ ಮಕ್ಕಳ ಉಪಶಮನ ಆರೈಕೆ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ, ಮಾತನಾಡಿದರು.
‘ಕ್ಯಾನ್ಸರ್‌ನಂತಹ ಗಂಭೀರ ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೋವಿನ ನಿರ್ವಹಣೆಯ ಜತೆಗೆ, ಜೀವನದ ಗುಣಮಟ್ಟ ಸುಧಾರಿಸಲು ಉಪಶಮನ ಆರೈಕೆ ಸಹಕಾರಿಯಾಗಲಿದೆ’ ಎಂದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್, ‘ಸಂಸ್ಥೆಯಲ್ಲಿರುವ ಉಪಶಮನ ಆರೈಕೆ ವಿಭಾಗದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಭಾಗವು ಕ್ಯಾನ್ಸರ್ ಕೇಂದ್ರಗಳಿಗೆ ಆಧಾರ ಸ್ತಂಭದಂತಿದ್ದು, ರೋಗಿಗಳಿಗೆ ನೋವು ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಈ ಆರೈಕೆ ವಿಭಾಗ ನೆರವಾಗಿದೆ’ ಎಂದರು.
ಸಂಸ್ಥೆಯ ಉಪಶಮನ ಆರೈಕೆ ವಿಭಾಗದ ಮುಖ್ಯಸ್ಥ ಡಾ.ಯದುರಾಜ್, ‘ಉಪಶಮನ ಆರೈಕೆಯಲ್ಲಿ ಅನುಸರಿಸಬೇಕಾದ ಕ್ರಮ ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು ಕಾರ್ಯಾಗಾರದ ಉದ್ದೇಶ’ ಎಂದು ಹೇಳಿದರು.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯೆ ಡಾ. ಅನುರಾಧ, ‘ರೋಗಿಗೆ ಪೂರ್ಣಪ್ರಮಾಣದ ಚಿಕಿತ್ಸೆ ನೀಡುವಲ್ಲಿ ಈ ಆರೈಕೆ ಪ್ರಮುಖಪಾತ್ರ ವಹಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.