ADVERTISEMENT

ಲಾಲ್‌ಬಾಗ್‌ನಲ್ಲಿ ‘ಪ್ಯಾರಾಮೆಡಿಕಲ್‌ ಫೋರ್ಸ್‌’ ಕೇಂದ್ರ

ಕಲಾವತಿ ಬೈಚಬಾಳ
Published 6 ಡಿಸೆಂಬರ್ 2018, 19:37 IST
Last Updated 6 ಡಿಸೆಂಬರ್ 2018, 19:37 IST
‘ಪ್ಯಾರಾಮೆಡಿಕಲ್‌ ಫೋರ್ಸ್‌’ ಕೇಂದ್ರ
‘ಪ್ಯಾರಾಮೆಡಿಕಲ್‌ ಫೋರ್ಸ್‌’ ಕೇಂದ್ರ   

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ಗೆ ದಿನನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ವೇಳೆ ಯಾರಿಗಾದರೂ ಹಾವು, ಜೇನು, ನಾಯಿ ಕಚ್ಚಿ ಗಾಯಗಳಾದರೆ ತಕ್ಷಣವೇಅವರಿಗೆ ಚಿಕಿತ್ಸೆ ನೀಡಲು ತೋಟಗಾರಿಕೆ ಇಲಾಖೆ ತುರ್ತು ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ.

ಉದ್ಯಾನದ ಒಳಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿತ್ತು. ಈ ಹಿಂದೆ ಪ್ರವಾಸಿಗರಿಗೆ ನಾಯಿ ಕಚ್ಚಿದ ಕೆಲವು ಪ್ರಕರಣಗಳೂ ನಡೆದಿದ್ದವು.ಇದರಿಂದ ಉದ್ಯಾನಕ್ಕೆ ಭೇಟಿ ನೀಡುವವರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹಾಗಾಗಿ, ಇಲಾಖೆ ಎಚ್ಚೆತ್ತುಕೊಂಡಿದೆ.

‘ಉದ್ಯಾನದ ಆವರಣದಲ್ಲಿರುವ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ‘ವಾಸವಿ ಆಸ್ಪತ್ರೆ’ ಉಚಿತವಾಗಿ ಈ ಸೇವೆಯನ್ನು ನೀಡುತ್ತಿದೆ. ಚಿಕಿತ್ಸೆ ನೀಡಲು ಒಬ್ಬರು ಪರಿಣಿತ ನರ್ಸ್‌ ಇದ್ದಾರೆ. ಹಾಸಿಗೆಯ ವ್ಯವಸ್ಥೆಯೂ ಇದೆ. ಗಾಯಾಳುಗಳಿಗೆ ಅಗತ್ಯ ಚುಚ್ಚುಮದ್ದನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಇಲಾಖೆಯ ಉಪ ನಿರ್ದೇಶಕ (ಲಾಲ್‌ಬಾಗ್‌) ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಸೇವೆ ಬೆಳಿಗ್ಗೆ 9ರಿಂದ ಸಂಜೆ 6ಗಂಟೆವರೆಗೆ ಮಾತ್ರ ಲಭ್ಯ. ವಾಯುವಿಹಾರಕ್ಕೆ ಬರುವವರಿಗೂ ತುರ್ತು ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಈ ಹಿಂದೆ ಒಂದು ಆಂಬುಲೆನ್ಸ್‌ ಸಸ್ಯತೋಟದೊಳಗೆ ಸುತ್ತು ಹಾಕುತ್ತಿತ್ತು. ಆದರೆ, ಸಾರ್ವಜನಿಕರ ಸಲಹೆಯಂತೆ ಅದನ್ನೀಗ ಒಂದೇ ಕಡೆ ನಿಲ್ಲಿಸುತ್ತಿದ್ದೇವೆ. ವ್ಯಾನ್‌ನಲ್ಲಿ ಆಮ್ಲಜನಕದ ಸಿಲಿಂಡರ್‌ ಇಲ್ಲ. ಆದರೆ, ಹಾಸಿಗೆಯ ವ್ಯವಸ್ಥೆ ಇದೆ. ಯಾರಿಗಾದರೂ ತಲೆಸುತ್ತು ಬಂದು ಬಿದ್ದರೆ, ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳು ಎದುರಾದರೆ, ತಕ್ಷಣ ಅಂಥವರನ್ನು ಚಿಕಿತ್ಸಾ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು.

ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳ ಹೆಚ್ಚಳ: ‘ಉದ್ಯಾನದ ಆವರಣದಲ್ಲಿ ಹಲವೆಡೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಕೇವಲ 24 ಪೆಟ್ಟಿಗೆಗಳಿದ್ದವು. ಈಗ ಆ ಸಂಖ್ಯೆಯನ್ನು 54ಕ್ಕೆ ಏರಿಸಲಾಗಿದೆ. ಗಾಜಿನ ಮನೆ, ಕೆರೆ, ಎಫ್‌ಐಯು, ಬೋನ್ಸಾಯ್‌ ವೃತ್ತ ಸೇರಿದಂತೆ ಉದ್ಯಾನದಲ್ಲಿರುವ ಎಲ್ಲ ವೃತ್ತಗಳಲ್ಲಿಯೂ ಈ ಪೆಟ್ಟಿಗೆಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ’ ಎಂದು ಚಂದ್ರಶೇಖರ್‌ ಮಾಹಿತಿ ನೀಡಿದರು.

ಮಾಹಿತಿ ಫಲಕ: ‘ಯಾರಿಗಾದರೂ ಆರೋಗ್ಯದಲ್ಲಿ ತೊಂದರೆಯಾದ ಕೂಡಲೇ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ತಿಳಿಸಲು ಪ್ರವೇಶ ದ್ವಾರಗಳು ಸೇರಿದಂತೆ ಉದ್ಯಾನದ ಆವರಣದ ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಸಂಪರ್ಕಕ್ಕೆ: 95350 15189,96111 88812.

**

‘ಪ್ರತ್ಯೇಕ ಕೇಂದ್ರ ಸ್ಥಾಪನೆಗೆ ಚಿಂತನೆ’

‘ಸದ್ಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿರುವ ‘ಪ್ಯಾರಾಮೆಡಿಕಲ್‌ ಫೋರ್ಸ್‌ ಕೇಂದ್ರ’ವನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಲು ಇಲಾಖೆ ಚಿಂತನೆ ನಡೆಸುತ್ತಿದೆ’ ಎನ್ನುತ್ತಾರೆ ಚಂದ್ರಶೇಖರ್‌.

‘ಈ ಕೇಂದ್ರ ಆರಂಭವಾಗಿರುವುದರ ಬಗ್ಗೆ ಕೇವಲ ಇಲ್ಲಿನ ಸಿಬ್ಬಂದಿಗೆ ಮಾತ್ರ ಮಾಹಿತಿ ಇತ್ತು. ಆವರಣದೊಳಗೆ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ, ಸಾರ್ವಜನಿಕರ ಸೇವೆಗೆ ಮತ್ತಷ್ಟು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಪ್ರತ್ಯೇಕವಾಗಿ ಸ್ಥಾಪನೆ ಮಾಡುವ ಉದ್ದೇಶವಿದೆ’ ಎಂದು ತಿಳಿಸಿದರು.

‘ರಸ್ತೆ ಕಾಮಗಾರಿ ಶೀಘ್ರ ಆರಂಭ’ :ಪ್ರಜಾವಾಣಿ ಜನಸ್ಪಂದನ ಫಲಶ್ರುತಿ

‘ಉದ್ಯಾನದಲ್ಲಿ ಹಲವೆಡೆ ರಸ್ತೆಗಳು ಹಾಳಾಗಿವೆ. ಹಿರಿಯ ನಾಗರಿಕರು ನಡೆದಾಡಲು ಕಷ್ಟವಾಗುತ್ತಿದೆ’ ಎಂದು ಸಾರ್ವಜನಿಕರು ಪ್ರಜಾವಾಣಿ ಜನಸ್ಪಂದನ (ನ.26) ನಡೆಸಿದ ವೇಳೆ ದೂರು ಹೇಳಿದ್ದರು. ಹಾಗಾಗಿ, ಸಸ್ಯ ತೋಟದ ಒಳಗಿನ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲು ₹5 ಕೋಟಿ ವಿಶೇಷ ಅನುದಾನ ನೀಡುವಂತೆ ಬಿಬಿಎಂಪಿಯನ್ನು ಕೋರಿದ್ದೇವು. ಇದೀಗ ಅನುದಾನವೂ ಸಿಗಲಿದ್ದು, ಶೀಘ್ರವೆ ರಸ್ತೆಗಳ ಕಾಮಗಾರಿ ಆರಂಭವಾಗಲಿದೆ’ ಎಂದು ಚಂದ್ರಶೇಖರ್‌ ಹೇಳಿದರು.‌

‘ಈ ತನಕ ಉದ್ಯಾನದಲ್ಲಿ ನಾಲ್ಕು ಶೌಚಾಲಯಗಳಿದ್ದವು. ಇದೀಗ ಮತ್ತೊಂದು ಹೊಸ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಿದ್ದೇವೆ. ಲೋಟಸ್‌ ಪಾಂಡ್‌ ಅಭಿವೃದ್ಧಿ ಕಾರ್ಯ ನಡೆಯಲಿದೆ. ಉದ್ಯಾನದೊಳಗೆ ವಾಹನಗಳ ಸಂಚಾರಕ್ಕೂ ಕಡಿವಾಣ ಹಾಕಲಿದ್ದೇವೆ’ ಎಂದರು.

‘ರಾಜವಂಶಸ್ಥರ ಕಥೆ ಹೇಳಲಿದೆ ಕಬ್ಬನ್‌’

ಕಬ್ಬನ್‌ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ರಾಜ್ಯವನ್ನಾಳಿದ ‌ರಾಜವಂಶಸ್ಥರ ಬಗ್ಗೆ ಮಾಹಿತಿ ನೀಡಲು ತೋಟಗಾರಿ‌ಕೆ ಇಲಾಖೆ ಕಲಾಕೃತಿಯೊಂದನ್ನು ನಿರ್ಮಾಣ ಮಾಡಲು ಸಿದ್ಧವಾಗುತ್ತಿದೆ.

‘ಕೇಂದ್ರ ಗ್ರಂಥಾಲಯದ ಹಿಂಭಾಗದಲ್ಲಿರುವ ರಿಂಗೂಟ್‌ ವೃತ್ತದಲ್ಲಿ ಸುಮಾರು 20 ಅಡಿ ಎತ್ತರದ, ಎಂಟು ದಿಕ್ಕುಗಳ ಕಲ್ಲಿನ ಸ್ತಂಭ ತಲೆ ಎತ್ತಲಿದೆ. ಶಾತವಾಹನ, ರಾಷ್ಟ್ರಕೂಟ, ಚಾಲುಕ್ಯ, ಗಂಗ, ಕದಂಬರು ಸೇರಿದಂತೆ ಹಲವು ರಾಜವಂಶಸ್ಥರ ಕಾಲಮಾನ, ಮನೆತನ, ರಾಜರ ಹೆಸರುಗಳು, ಲಾಂಭನ ಇತ್ಯಾದಿ ಮಾಹಿತಿಯನ್ನು ನೀಡಲಿದೆ’ ಎಂದು ಕಬ್ಬನ್‌ ಉದ್ಯಾನದ ಉಪನಿರ್ದೇಶಕ ಮಹಾಂತೇಶ್‌ ಮುರುಗೋಡ ಮಾಹಿತಿ ನೀಡಿದರು.

‘ಸ್ತಂಭ ನಿರ್ಮಾಣದ ಬಗ್ಗೆ ಈಗಾಗಲೇ ತೋಟಗಾರಿಕೆ ಸಚಿವರು ಅನುಮತಿ ನೀಡಿದ್ದಾರೆ. ಇತಿಹಾಸಕಾರರಿಂದ ಸೂಕ್ತ ಮಾಹಿತಿ ಪಡೆದುಕೊಳ್ಳಲಾಗಿದೆ. ಇನ್ನೊಂದು ಸುತ್ತಿನ ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.