ADVERTISEMENT

ಪರಪ್ಪನ ಅಗ್ರಹಾರ ಜೈಲು: ಹೇಳಿಕೆಗೆ ‘ಅಸಹಕಾರ’; ತನಿಖೆ ವಿಳಂಬ

ಕೈದಿಗಳಿಗೆ ಮೊಬೈಲ್‌, ಡ್ರಗ್ಸ್‌ ಪೂರೈಕೆ, ವರ್ಷದಲ್ಲಿ 29 ಪ್ರಕರಣ

ಆದಿತ್ಯ ಕೆ.ಎ
Published 14 ನವೆಂಬರ್ 2025, 19:30 IST
Last Updated 14 ನವೆಂಬರ್ 2025, 19:30 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ವರ್ಷದಲ್ಲಿ 29 ಎಫ್‌ಐಆರ್‌ಗಳು ದಾಖಲಾಗಿವೆ.

ಈ ಪೈಕಿ 25 ಪ್ರಕರಣಗಳು ದಾಖಲಾಗಿ ಆರು ತಿಂಗಳು ಕಳೆದಿದ್ದರೂ ಪೊಲೀಸ್‌ ತನಿಖೆಯ ಅಂತಿಮ ವರದಿ ನ್ಯಾಯಾಲಯಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ.

ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲವು ಪ್ರಕರಣಗಳಲ್ಲಿ ಹೇಳಿಕೆ ದಾಖಲಿಸಲು ಹಿಂದೇಟು ಹಾಕುತ್ತಿರುವುದು ಪೊಲೀಸ್ ತನಿಖೆ ಹಾಗೂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕೆ ಹಿನ್ನಡೆಯಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ADVERTISEMENT

ಜೈಲಿನಲ್ಲಿರುವ ಅತ್ಯಾಚಾರ, ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದಕ ಸಂಘಟನೆಯ ಉಗ್ರ, ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ್ದ ಪ್ರಕರಣದ ಆರೋಪಿಗೆ ಮೊಬೈಲ್‌ ನೀಡಿದ್ದ ವಿಚಾರದಲ್ಲಿ ಕೇಂದ್ರ ಕಾರಾಗೃಹವು ಮತ್ತೆ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಜೈಲಿನ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಬ್ಯಾರಕ್‌ಗೆ ಮದ್ಯ ತರಿಸಿಕೊಂಡು ಪಾರ್ಟಿ ನಡೆಸಿ ನೃತ್ಯ ಮಾಡಿದ್ದಕ್ಕೆ ಸಂಬಂಧಿಸಿದಂತೆ ನಾಲ್ವರು ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಮೊಬೈಲ್‌ ಪೂರೈಕೆ ಪ್ರಕರಣದಲ್ಲಿ ನಾಲ್ಕು ಎನ್‌ಸಿಆರ್‌ಗಳು ದಾಖಲಾಗಿದ್ದು, ಉನ್ನತಮಟ್ಟದ ಸಮಿತಿ ತನಿಖೆ ಆರಂಭಿಸಿದೆ. 

‘ಕಳೆದ ಜೂನ್‌ನಲ್ಲಿ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ಮಾಡಿ, ಬ್ಯಾರಕ್‌ಗಳ ಪರಿಶೀಲನೆ ನಡೆಸಿದ್ದರು. ತಂಬಾಕು ಉತ್ಪನ್ನಗಳಾದ ಚೈನಿ, ಸ್ವಾಗತ್‌ ಗೋಲ್ಡ್‌, ಗಾಂಜಾ ಸೇದಲು ಕೈದಿಗಳು ಬಳಸುತ್ತಿದ್ದ ಕೊಳವೆಗಳು, ಚಾಕು, ಟ್ರಿಮ್ಮರ್‌, ಕತ್ತರಿ, ಮೊಬೈಲ್‌ ಚಾರ್ಜರ್‌, ಬೆಂಕಿ ಪೊಟ್ಟಣ, ಲೈಟರ್, ಪ್ಲೇ ಕಾರ್ಡ್ಸ್, ಆಯುಧಗಳು, ಕಬ್ಬಿಣದ ರಾಡುಗಳು ಪತ್ತೆ ಆಗಿದ್ದವು. ಹಣ ಸಹ ಸಿಕ್ಕಿತ್ತು. ಆಗಲೂ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಈ ಪ್ರಕರಣವೂ ಸೇರಿದಂತೆ 25 ಪ್ರಕರಣಗಳ ತನಿಖೆ ಆರಂಭಿಸಿ ಆರು ತಿಂಗಳು ಕಳೆದಿದೆ. ಪ್ರಾಥಮಿಕ ತನಿಖಾ ವರದಿಯನ್ನಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೆ, ಜೈಲು ಸಿಬ್ಬಂದಿ, ಅಧಿಕಾರಿಗಳ ಅಸಹಕಾರದಿಂದ ತನಿಖೆ ಪ್ರಗತಿ ಕಂಡಿಲ್ಲ. ಅಂತಿಮ ವರದಿ ಸಲ್ಲಿಕೆ ಸಾಧ್ಯವಾಗಿಲ್ಲ’ ಎಂದು ತನಿಖಾ ಮೂಲಗಳು ಹೇಳಿವೆ.

ಆಗ್ನೇಯ ವಿಭಾಗದ ಹುಳಿಮಾವು, ಪರಪ್ಪನ ಅಗ್ರಹಾರ, ಬೇಗೂರು, ಹುಳಿಮಾವು, ಎಲೆಕ್ಟ್ರಾನಿಕ್‌ ಸಿಟಿ ಠಾಣೆಗಳ ಹಾಗೂ ಸಿಸಿಬಿ ಪೊಲೀಸರು ವಿವಿಧ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.

‘ಕಾರಾಗೃಹದಲ್ಲಿ 285 ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಎರಡು ಕ್ಯಾಮೆರಾಗಳು ಕೆಟ್ಟು ಹೋಗಿದ್ದು, ದುರಸ್ತಿಗೆ ಸೂಚನೆ ನೀಡಲಾಗಿದೆ. ಇನ್ಮುಂದೆ ಮೊಬೈಲ್‌ ಪತ್ತೆಯಾದರೆ ಯಾವ ಬಂದಿಗಳ ಬ್ಯಾರಕ್‌ನಲ್ಲಿ ಮೊಬೈಲ್‌ ಸಿಕ್ಕಿದೆ? ಆ ಬ್ಯಾರಕ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಯಾರು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ ದೂರು ನೀಡಬೇಕು ಎಂಬುದಾಗಿ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್‌ಗೆ ಸೂಚಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಹಣದ ಮೂಲ, ಸಿಮ್‌ ಮಾಲೀಕರ ಪತ್ತೆ, ಮೊಬೈಲ್‌ಗಳನ್ನು ಕಾರಾಗೃಹಕ್ಕೆ ಪೂರೈಸಿದ್ದವರ ವಿವರ ಕಲೆ ಹಾಕುವುದು ತಡವಾಗುತ್ತಿದೆ. ಅಲ್ಲದೇ, ದೂರವಾಣಿ ಕರೆಗಳ ಮಾಹಿತಿ(ಸಿಡಿಆರ್) ಬರುವುದು ತಡವಾಗಿರುವ ಕಾರಣ ತನಿಖೆಗೂ ಅಡ್ಡಿ ಆಗುತ್ತಿದೆ’ ಎಂದು ಮೂಲಗಳು ಹೇಳಿವೆ.

 

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪತ್ತೆಯಾಗಿದ್ದ ನಿಷೇಧಿತ ವಸ್ತುಗಳು (ಸಂಗ್ರಹ ಚಿತ್ರ) 

ದರ್ಶನ್‌ಗೆ ಆತಿಥ್ಯ: ಅಧಿಕಾರಿಗಳ ಕೈವಾಡ ಸಾಬೀತು

ಕಾರಾಗೃಹದ ಬ್ಯಾರಕ್‌ನ ಹೊರಗೆ ಕುರ್ಚಿಯಲ್ಲಿ ಕುಳಿತು ಟೀ ಕುಡಿಯುತ್ತಾ ಸಿಗರೇಟ್‌ ಸೇದುತ್ತಾ ಹರಟೆ ಹೊಡೆಯುತ್ತಿದ್ದ ದರ್ಶನ್‌ ರೌಡಿ ವಿಲ್ಸನ್‌ ಗಾರ್ಡನ್‌ ನಾಗ ಕುಳ್ಳ ಸೀನ ದರ್ಶನ್‌ ವ್ಯವಸ್ಥಾಪಕ ನಾಗರಾಜ್ ಕರ್ತವ್ಯ ಲೋಪ ಎಸಗಿರುವ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರಗಿನಿಂದ ವಿಡಿಯೊ ಕರೆ ಮಾಡಿದ್ದ ವ್ಯಕ್ತಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ 2024ರ ಆಗಸ್ಟ್‌ 26ರಂದು ಮೂರು ಎಫ್‌ಐಆರ್‌ಗಳು ದಾಖಲಾಗಿದ್ದವು. ಆ ಮೂರು ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯೂ ನ್ಯಾಯಾಲಯಕ್ಕೆ ಸಲ್ಲಿಕೆ ಆಗಿಲ್ಲ.

‘ದರ್ಶನ್‌ಗೆ ಸಿಗರೇಟ್‌ ಪೂರೈಸಿದ್ದವರು ಜೈಲಿನಲ್ಲಿ ಮೊಬೈಲ್ ಬಳಕೆ ಹಾಗೂ ರಾತ್ರಿ ವೇಳೆ ಜೈಲಿಗೆ ನಿಷೇಧಿತ ವಸ್ತುಗಳನ್ನು ಸಾಗಣೆ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲಾಗಿದ್ದವು. ತನಿಖೆ ಆರಂಭಿಸಿ ಆರು ತಿಂಗಳ ಬಳಿಕ ಜೈಲಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆಗೆ ಅನುಮತಿ ಸಿಕ್ಕಿತ್ತು. ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಮೂರು ಪ್ರಕರಣದಲ್ಲೂ ಅಧಿಕಾರಿಗಳು ಸಿಬ್ಬಂದಿ ಶಾಮೀಲಾಗಿರುವುದು ಸಾಬೀತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷ್ಯಗಳು ಲಭಿಸಿದ್ದವು. ತನಿಖಾ ವರದಿಯು ಪರಿಶೀಲನಾ ಹಂತದಲ್ಲಿದ್ದು ಕೋರ್ಟ್‌ಗೆ ಸಲ್ಲಿಕೆ ಆಗಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.