ADVERTISEMENT

ಬಸ್ ಪಾಸ್ ಗಲಾಟೆ: ಪಿಎಸ್‌ಐ ಕಪಾಳಕ್ಕೆ ಹೊಡೆದು, ಗುಪ್ತಾಂಗಕ್ಕೆ ಒದ್ದ ವಿದ್ಯಾರ್ಥಿ

ದಂತ ವೈದ್ಯಕೀಯ ವಿದ್ಯಾರ್ಥಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 18:25 IST
Last Updated 14 ಜೂನ್ 2023, 18:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಸ್ ಪಾಸ್ ವಿಚಾರವಾಗಿ ನಡೆದಿದ್ದ ಗಲಾಟೆ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಪೀಣ್ಯ ಠಾಣೆಯ ಪಿಎಸ್‌ಐ ಸಿದ್ದು ಹೂಗಾರ ಅವರ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ದಂತ ವೈದ್ಯಕೀಯ ವಿದ್ಯಾರ್ಥಿ ಮೌನೇಶ್ (20) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ವಿದ್ಯಾರಣ್ಯಪುರ ನಿವಾಸಿ ಮೌನೇಶ್, ಯಶವಂತಪುರ ಬಳಿಯ ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದ ಈತ, ವಿಚಾರಣೆ ಸಂದರ್ಭದಲ್ಲಿ ಪಿಎಸ್ಐ ಕಪಾಳಕ್ಕೆ ಹೊಡೆದು ಗುಪ್ತಾಂಗಕ್ಕೆ ಒದ್ದಿದ್ದ. ಕೃತ್ಯದ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಮೌನೇಶ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪೊಲೀಸರ ಆರೋಪ ನಿರಾಕರಿಸಿರುವ ಮೌನೇಶ್ ಪೋಷಕರು, ‘ಮಗ ಯಾವುದೇ ತಪ್ಪು ಮಾಡಿಲ್ಲ. ಕಾಲೇಜಿಗೆ ಹೋಗುತ್ತಿದ್ದ ವೇಳೆ ನಿರ್ವಾಹಕರೇ ಕಾಲೇಜು ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದಾರೆ. ನಂತರ, ಠಾಣೆಗೆ ಕರೆದೊಯ್ದು ಪೊಲೀಸರು ಹಲ್ಲೆ ಮಾಡಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

ಘಟನೆ ವಿವರ: ‘ಆರೋಪಿ ಮೌನೇಶ್ ಬುಧವಾರ ಬೆಳಿಗ್ಗೆ ಕಾಲೇಜಿಗೆ ಹೋಗುವುದಕ್ಕಾಗಿ ಯಲಹಂಕದಿಂದ ಜಾಲಹಳ್ಳಿಗೆ ಹೊರಟಿದ್ದ ಬಿಎಂಟಿಸಿ ಬಸ್‌ ಹತ್ತಿದ್ದ. ನಿರ್ವಾಹಕ ಅಶೋಕ ಟಿಕೆಟ್ ಪಡೆಯುವಂತೆ ಹೇಳಿದ್ದರು. ವಿದ್ಯಾರ್ಥಿ ಪಾಸ್‌ ಇರುವುದಾಗಿ ಮೌನೇಶ್ ತಿಳಿಸಿದ್ದ. ಪಾಸ್ ಹಾಗೂ ಕಾಲೇಜು ಗುರುತಿನ ಚೀಟಿ ತೋರಿಸುವಂತೆ ನಿರ್ವಾಹಕ ಒತ್ತಾಯಿಸಿದ್ದ’ ಎಂದು ಮೂಲಗಳು ಹೇಳಿವೆ.

‘ಬಸ್ ಪಾಸ್ ಮಾತ್ರ ತೋರಿಸಿದ್ದ ಮೌನೇಶ್, ಕಾಲೇಜು ಗುರುತಿನ ಚೀಟಿ ತೋರಿಸಲು ನಿರಾಕರಿಸಿದ್ದ. ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಕೋಪಗೊಂಡಿದ್ದ ಮೌನೇಶ್, ಅಶೋಕ್‌ ಅವರಿಗೆ ಹೊಡೆದಿದ್ದ. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಬಳಿಕ, ಚಾಲಕ ಬಸ್ ಸಮೇತ ಆರೋಪಿಯನ್ನು ಪೀಣ್ಯ ಠಾಣೆಗೆ ಕರೆದೊಯ್ದಿದ್ದ’ ಎಂದು ತಿಳಿಸಿವೆ.

‘ಮೌನೇಶ್‌ನನ್ನು ವಶಕ್ಕೆ ಪಡೆದಿದ್ದ ಪಿಎಸ್‌ಐ ಸಿದ್ದು, ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಕಾಲೇಜು ಗುರುತಿನ ಚೀಟಿ ಏಕೆ ಕೇಳಬೇಕು? ಎಂಬು ಮೌನೇಶ್ ಪ್ರಶ್ನಿಸಿದ್ದ. ಎದುರು ಮಾತನಾಡಬೇಡವೆಂದು ಪಿಎಸ್‌ಐ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ, ಪಿಎಸ್‌ಐ ಅವರ ಕಪಾಳಕ್ಕೆ ಹೊಡೆದು ಗುಪ್ತಾಂಗಕ್ಕೆ ಒದ್ದಿದ್ದ. ಠಾಣೆಯಲ್ಲಿದ್ದ ಸಿಬ್ಬಂದಿ ಕೂಡಲೇ ರಕ್ಷಣೆಗೆ ಹೋಗಿದ್ದರು. ಮೌನೇಶ್‌ನನ್ನು ಹಿಡಿದು ಸೆಲ್‌ಗೆ ಹಾಕಿದ್ದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.