ADVERTISEMENT

ಪಿಇಎಸ್‌: ಪಠ್ಯದಲ್ಲೇ ಗಾಂಧಿ ಅಧ್ಯಯನ

ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ–ಆಳೆತ್ತರದ ಕಂಚಿನ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:20 IST
Last Updated 30 ಸೆಪ್ಟೆಂಬರ್ 2019, 20:20 IST
ಡಾ. ಎಂ. ಆರ್‌. ದೊರೆಸ್ವಾಮಿ
ಡಾ. ಎಂ. ಆರ್‌. ದೊರೆಸ್ವಾಮಿ   

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಗರದ ಪಿಇಎಸ್‌ ವಿಶ್ವವಿದ್ಯಾಲಯವು ತನ್ನ ಎಂಜಿನಿಯರಿಂಗ್‌ ಮತ್ತು ಪದವಿ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಮತ್ತು ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜೀವನ ಕುರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ.

‘ಯುವ ಪೀಳಿಗೆಗೆ ದೇಶದ ಮಹಾನ್‌ ವ್ಯಕ್ತಿಗಳ ಬಗ್ಗೆ ಮಾಹಿತಿಯೇ ಇಲ್ಲದ ಸ್ಥಿತಿ ಇದೆ. ಕಡ್ಡಾಯವಾಗಿ ಇವರನ್ನು ಓದುವಂತೆ ಮಾಡಿ, ಕೊನೆಯಲ್ಲಿ ಪದವಿಯ ಜತೆಗೆ ಪ್ರಮಾಣಪತ್ರ ನೀಡುವ ಪದ್ಧತಿಯನ್ನು ವಿಶ್ವವಿದ್ಯಾಲಯ ಜಾರಿಗೆ ತಂದಿದೆ. ವಿಶ್ವವಿದ್ಯಾಲಯದ ಮೌಲ್ಯವರ್ಧಿತ ಕಾರ್ಯಕ್ರಮ ಇದು’ ಎಂದು ಕುಲಾಧಿಪತಿ ಡಾ. ಎಂ. ಆರ್. ದೊರೆಸ್ವಾಮಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗಾಂಧಿ ಅಧ್ಯಯನಕ್ಕೆ ಅಗತ್ಯವಾದ ಪುಸ್ತಕಗಳ ಭಂಡಾರವೇ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದೆ. ಬ್ರಿಟನ್‌ನಲ್ಲಿನ ಗ್ರಂಥಾಲಯ ಮಾದರಿಯಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ವಿಶ್ವವಿದ್ಯಾಲಯದ 13ನೇ ಮಹಡಿಯಲ್ಲಿ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ADVERTISEMENT

ಈ ವರ್ಷದಿಂದ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಗಾಂಧಿ ಪ್ರತಿಮೆ: ವಿದ್ಯಾರ್ಥಿಗಳಲ್ಲಿ ಗಾಂಧಿ ತತ್ವ, ಮೌಲ್ಯಗಳ ಪ್ರಭಾವ ಬೀರುವ ಸಲುವಾಗಿ ಮಹಾತ್ಮನ ಆಳೆತ್ತರದ ಕಂಚಿನ ಪ್ರತಿಮೆಯನ್ನು ಬುಧವಾರ ರಿಂಗ್‌ ರಸ್ತೆಯ ಪಿಎಎಸ್‌ ವಿಶ್ವವಿದ್ಯಾಲಯ ಆವರಣದಲ್ಲಿ ಅನಾವರಣ ಗೊಳಿಸಲಾಗುವುದು ಎಂದು ತಿಳಿಸಿದರು.

ಜಂಟಿ ಅಧ್ಯಯನ, ವಿದ್ಯಾರ್ಥಿಗಳಿಗೆ ತರಬೇತಿಯಂತಹ ಕಾರ್ಯಕ್ರಮಗಳಿಗಾಗಿ ಜಪಾನ್‌ನ ಎಸ್‌ಬಿಎಕ್ಸ್‌ ಕಾರ್ಪೊರೇಷನ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸಮರಸ: ವಿದ್ಯಾರ್ಥಿಗಳಿಗೆ ದೇಶದ ಶ್ರೇಷ್ಠ ಕಲಾವಿದರ ಪರಿಚಯ ಮಾಡುವ ಮತ್ತು ಆ ಮೂಲಕ ಅವರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಇದೇ 5 ಮತ್ತು 6ರಂದು ‘ಸಮರಸ’ ಹೆಸರಿನಲ್ಲಿ ಎಂ.ಆರ್‌. ದೊರೆಸ್ವಾಮಿ ಆಡಿಟೋರಿಯಂನಲ್ಲಿ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ ಎಂದು ಹೇಳಿದರು.

₹ 35 ಲಕ್ಷ ಸಂಬಳದ ಉದ್ಯೋಗ

ಪಿಇಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಹಲವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಿ ಕೇವಲ 2 ತಿಂಗಳಲ್ಲೇ ಪ್ರತಿಷ್ಠಿತ ಕಂಪನಿಗಳಿಂದ ಉದ್ಯೋಗ ಅವಕಾಶ ದೊರೆತಿದೆ. ಆರು ಮಂದಿಗೆ ವಾರ್ಷಿಕ ತಲಾ ₹ 35 ಲಕ್ಷ ಸಂಬಳದ ಉದ್ಯೋಗದ ಭರವಸೆ ದೊರೆತಿದೆ ಎಂದು ಡಾ. ಎಂ. ಆರ್‌. ದೊರೆಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.