ADVERTISEMENT

ಪೌರಕಾರ್ಮಿಕರಿಗೆ PF ಕಂತು ಪಾವತಿಸದ ಗುತ್ತಿಗೆದಾರರು: ಜಿಬಿಎಗೆ ₹180 ಕೋಟಿ ನಷ್ಟ

ಆರ್. ಮಂಜುನಾಥ್
Published 12 ನವೆಂಬರ್ 2025, 22:58 IST
Last Updated 12 ನವೆಂಬರ್ 2025, 22:58 IST
ಪಿಎಫ್‌ ಲಾಂಛನ
ಪಿಎಫ್‌ ಲಾಂಛನ   

ಬೆಂಗಳೂರು: ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರು ಆರು ಸಾವಿರ ಪೌರಕಾರ್ಮಿಕರಿಗೆ ಐದೂವರೆ ವರ್ಷ ಭವಿಷ್ಯ ನಿಧಿ (ಪಿಎಫ್‌) ಪಾವತಿಸದೇ ಇದ್ದುದರಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ₹180 ಕೋಟಿಗೂ ಹೆಚ್ಚು ನಷ್ಟವಾಗಿದೆ. ಆದರೂ, ತಪ್ಪಿತಸ್ಥರ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

2011ರ ಜನವರಿಯಿಂದ 2017ರ ಜುಲೈವರೆಗೆ ನಗರದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ, ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದ್ದ ಗುತ್ತಿಗೆದಾರರು, ಬಿಬಿಎಂಪಿಯಿಂದ ಸಂಪೂರ್ಣ ಹಣ ಪಡೆದುಕೊಂಡಿದ್ದಾರೆ. ಹಾಗಿದ್ದರೂ ಗುತ್ತಿಗೆ ಆಧಾರದಲ್ಲಿದ್ದ ಪೌರಕಾರ್ಮಿಕರ ಪಿಎಫ್‌ ಕಂತನ್ನು ಪಾವತಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಂಡಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌) ಮೂಲ ಉದ್ಯೋಗದಾತನಾಗಿರುವ ಬಿಬಿಎಂಪಿಯಿಂದಲೇ ಕಂತಿನ ಪೂರ್ಣ ಮೊತ್ತವನ್ನು ವಸೂಲಿ ಮಾಡಿದೆ.

‘ತೆರಿಗೆ ಕಟ್ಟದಿದ್ದರೆ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುತ್ತೇವೆ’ ಎಂದು ಜಿಬಿಎ (ಹಿಂದಿನ ಬಿಬಿಎಂಪಿ) ಅಧಿಕಾರಿಗಳು ಹೇಳುತ್ತಿದ್ದರು. ಅದೇ ಪ್ರಕ್ರಿಯೆಯನ್ನು ಇಪಿಎಫ್‌ ನಡೆಸಿದ್ದು, ಬಿಬಿಎಂಪಿಯ ಖಾತೆಯಲ್ಲಿ ₹90 ಕೋಟಿಗೂ ಹೆಚ್ಚು ಹಣವನ್ನು ಜಪ್ತಿ ಮಾಡಿಕೊಂಡಿದೆ. ಇದನ್ನು ಪ್ರಶ್ನಿಸಿ ಬಿಬಿಎಂಪಿ ಎರಡು ಬಾರಿ ಹೈಕೋರ್ಟ್‌ ಮೆಟ್ಟಿಲೇರಿದ್ದರೂ, ಅರ್ಜಿ ವಜಾಗೊಂಡಿದೆ. ಹೀಗಾಗಿ, ಈ ಹಣವನ್ನು ವಾಪಸ್‌ ನೀಡುವುದು ಸಾಧ್ಯವಿಲ್ಲ ಎಂದು ಇಪಿಎಫ್‌ ಸ್ಪಷ್ಟಪಡಿಸಿದೆ.

ADVERTISEMENT

ಪಿಎಫ್‌ ಕಂತು ಪಾವತಿಯಾಗದ ಬಗ್ಗೆ ‘ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘ’ 2014ರಲ್ಲಿ ದೂರು ನೀಡಿತ್ತು. 2017ರಲ್ಲಿ ಮತ್ತೆ ಈ ಬಗ್ಗೆ ದೂರು ದಾಖಲಾಯಿತು. ಅಂದಿನಿಂದ ವಿಚಾರಣೆ ನಡೆಸಿದ ಇಪಿಎಫ್‌, ಗುತ್ತಿಗೆದಾರರಿಗಿಂತ ಮೂಲ ಉದ್ಯೋಗದಾತರಾಗಿರುವ ಬಿಬಿಎಂಪಿಯೇ ಇದನ್ನು ಸರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ಸಾಕಷ್ಟು ಸಮಯ ನೀಡಿತ್ತು. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಕೆನರಾ ಬ್ಯಾಂಕ್‌ನ ಬಿಬಿಎಂಪಿ ಕೇಂದ್ರ ಕಚೇರಿಯ ಶಾಖೆಯಲ್ಲಿರುವ ಬಿಬಿಎಂಪಿ ಖಾತೆಯಿಂದ ₹90 ಕೋಟಿ ಅನ್ನು 2018ರ ಜನವರಿ 23ರಂದು ಇಪಿಎಫ್‌ ‘ಜಪ್ತಿ’ ಮಾಡಿ, ಹಣ ಪಾವತಿಸುವಂತೆ ಬ್ಯಾಂಕ್‌ಗೆ ಸೂಚಿಸಿತು. ಇದನ್ನು ಪ್ರಶ್ನಿಸಿ ಬಿಬಿಎಂಪಿ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೂ ಅದು ವಜಾಗೊಂಡಿತು. 2024ರಲ್ಲಿ ಹೈಕೋರ್ಟ್‌ಗೆ ಬಿಬಿಎಂಪಿ ಮತ್ತೆ ಅರ್ಜಿ ಸಲ್ಲಿಸಿತು.

ಪಿಎಫ್‌ ಪ್ರಾದೇಶಿಕ ಆಯುಕ್ತರಲ್ಲಿ ಮೇಲ್ಮನವಿ ಸಲ್ಲಿಸಿ, ಅವರಿಗೆ ಎಲ್ಲ ರೀತಿಯ ದಾಖಲೆಗಳನ್ನು ಒದಗಿಸಿ, ಮನವರಿಕೆ ಮಾಡಿಕೊಟ್ಟು, ಹಣದ ಬಗ್ಗೆ ಅವರಿಂದಲೇ ಆದೇಶ ಪಡೆದುಕೊಳ್ಳುವಂತೆ ಹೈಕೋರ್ಟ್‌ ಆದೇಶಿಸಿತು. ಈ ಬಗ್ಗೆ, ಮರು ವಿಚಾರಣೆ ನಡೆಸಿದ ಪಿಎಫ್‌ ಪ್ರಾದೇಶಿಕ ಆಯುಕ್ತ–1 ಮಿಹಿರ್‌ ಕುಮಾರ್‌ ಅವರು, ಸೆಪ್ಟೆಂಬರ್‌ 15ರಂದು ಆದೇಶ ನೀಡಿದ್ದಾರೆ.

‘ಬಿಬಿಎಂಪಿ ಖಾತೆಯಿಂದ ಪಡೆದಿರುವ ಹಣವನ್ನು ವಾಪಸ್‌ ನೀಡಲು ಆಗುವುದಿಲ್ಲ. ಅದಕ್ಕೆ ಸೂಕ್ತ ವಿವರಣೆ, ದಾಖಲೆಗಳನ್ನು ಒದಗಿಸಿಲ್ಲ’ ಎಂದು ತಿಳಿಸಿದ್ದಾರೆ. ಅಲ್ಲದೆ, ‘ಪಿಎಫ್‌ ಕಂತು ಪಾವತಿಸದ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಂಡು, ಕಾನೂನಾತ್ಮಕವಾಗಿ ಎಲ್ಲ ರೀತಿಯ ಬಾಕಿಯನ್ನು ಅವರಿಂದಲೇ ವಸೂಲಿ ಮಾಡಬೇಕು. ಈ ಗುತ್ತಿಗೆದಾರರಿಗೆ ಯಾವುದೇ ರೀತಿಯ ಗುತ್ತಿಗೆಯನ್ನೂ ನೀಡಬಾರದು. ಭವಿಷ್ಯ ನಿಧಿ ಖಾತೆಗೆ ಹಣ ಸಂದಾಯವಾಗಿರುವ ಬಗ್ಗೆ ಪ್ರತಿ ತಿಂಗಳ ಇಸಿಆರ್‌ ಅನ್ನು 60 ದಿನದೊಳಗೆ ಸಲ್ಲಿಸಬೇಕು’ ಎಂದು ಆದೇಶಿಸಿದ್ದಾರೆ. ಇದರ ಪ್ರತಿಯನ್ನು ಜಿಬಿಎ ಮುಖ್ಯ ಆಯುಕ್ತರಿಗೆ ಕಳುಹಿಸಿದ್ದಾರೆ.

ಪಿಎಫ್‌ ಕಂತು ಪಾವತಿಸದ ಗುತ್ತಿಗೆದಾರರು
ಎ.ಕೆ. ಎಂಟರ್‌ಪ್ರೈಸಸ್, ಅಸೋಸಿಯೇಟೆಡ್‌ ಹ್ಯೂಮನ್‌ ರಿಸೋರ್ಸ್, ಬಿ.ಆರ್‌. ಶಂಕರ ರೆಡ್ಡಿ, ಸಿ.ಟಿ. ಜಗನ್ನಾಥ ಎಂಟರ್‌ಪ್ರೈಸಸ್, ಡಿ. ಗಣೇಶ್‌ ಶಂಕರ್‌, ದ್ರವ್ಯ ಎಂಟರ್‌ಪ್ರೈಸಸ್, ಹರ್ಷಿತಾ ಎಂಟರ್‌ಪ್ರೈಸಸ್, ಕೆ. ಪ್ರಭಾಕರ್‌, ಲವಕುಶ ಟ್ರಾನ್ಸ್‌ಪೋರ್ಟ್‌, ಎನ್‌ಕೆಎಸ್‌ ಎಂಟರ್‌ಪ್ರೈಸಸ್‌, ನಾಗೇಶ್‌ ರಾಜಣ್ಣ, ನಿತ್ಯಾ ಎಂಟರ್‌ಪ್ರೈಸಸ್, ಆರ್‌. ಶಂಕರ ರೆಡ್ಡಿ, ರಾಮಯ್ಯ ಅಜಯ್‌ ಎಂಟರ್‌ಪ್ರೈಸಸ್, ರಾಮಯ್ಯ ರೆಡ್ಡಿ ಶಂಕರ್‌ ರೆಡ್ಡಿ, ಶಿಶಿರ್‌ ಅಸೋಸಿಯೇಟ್ಸ್‌, ಶ್ರೀ ಅನ್ನಪೂರ್ಣೇಶ್ವರಿ ಅಸೋಸಿಯೇಟ್ಸ್‌, ಎಸ್‌ಎಲ್‌ಎನ್‌ ಕ್ಲೀನಿಂಗ್‌ ಆ್ಯಂಡ್‌ ಸರ್ವೀಸಸ್, ಎಸ್‌ಎಲ್‌ವಿ ಎಂಟರ್‌ಪ್ರೈಸಸ್, ಶ್ರೀ ಲಕ್ಷ್ಮಿ ಎಂಟರ್‌ಪ್ರೈಸಸ್, ಶ್ರೀನಿವಾಸ ಎಂಟರ್‌ಪ್ರೈಸಸ್, ಉಮಾ ಮಹೇಶ್ವರ್‌ರಾವ್‌, ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ., ಅಶೋಕ ಬಯೊ ಗ್ರೀಟ್‌ ಪ್ರೈ. ಲಿ., ಎಂಎಸ್‌ಜಿಪಿ ಇನ್‌ಫ್ರಾ ಟೆಕ್‌ ಪ್ರೈ.ಲಿ.
  • ಬಿಬಿಎಂಪಿ ಜವಾಬ್ದಾರಿಯನ್ನು ಗುತ್ತಿಗೆದಾರರ ಮೇಲೆ ವರ್ಗಾಯಿಸಲು ಸಾಧ್ಯವಿಲ್ಲ

  • ಹಲವು ಅವಕಾಶಗಳನ್ನು ನೀಡಿದ್ದರೂ ಸಂಪೂರ್ಣ ಮಾಹಿತಿ ಒದಗಿಸದ ಬಿಬಿಎಂಪಿ

  • ನೇರ ಅಥವಾ ಗುತ್ತಿಗೆಯಲ್ಲಿರುವ ಪೌರಕಾರ್ಮಿಕರ ಹಣ ಭವಿಷ್ಯ ನಿಧಿ ಸೇರುವಂತೆ ಮಾಡುವುದು ಬಿಬಿಎಂಪಿಯ ಆದ್ಯ ಕರ್ತವ್ಯ

  • ಘನತ್ಯಾಜ್ಯ ನಿರ್ವಹಣೆಯಲ್ಲಿ 7,400 ಉದ್ಯೋಗಿಗಳಿದ್ದಾರೆ ಎಂದಿದ್ದರೂ, ಕೆಲಸಕ್ಕೆ ಸೇರಿಕೊಂಡ ದಿನ, ಇಪಿಎಫ್‌ ಖಾತೆ ಸಂಖ್ಯೆ ನೀಡಿಲ್ಲ

ಕಾರ್ಮಿಕರೇ ಇಲ್ಲದೆ ಕಸ ವಿಲೇವಾರಿ!

‘2017ರ ಜನವರಿಯಿಂದ ಡಿಸೆಂಬರ್‌ವರೆಗೆ ಪೂರ್ವ, ದಕ್ಷಿಣ, ಯಲಹಂಕ ಮತ್ತು ದಾಸರಹಳ್ಳಿ ವಲಯದಲ್ಲಿ ತ್ಯಾಜ್ಯ ವಿಲೇವಾರಿ, ಸಂಗ್ರಹಕ್ಕೆ ಪೌರಕಾರ್ಮಿಕರೇ ಇರಲಿಲ್ಲ ಎಂದು  ಬಿಬಿಎಂಪಿ ಹೇಳಿದೆ. ಇದು ಅಸಾಧ್ಯವಾದದು’ ಎಂದು ಪಿಎಫ್‌ನ ಜಾರಿ ಅಧಿಕಾರಿಗಳು ಹೇಳಿದ್ದಾರೆ.

ಅಷ್ಟೇ ಅಲ್ಲ, ‘ಯಲಹಂಕ ಮತ್ತು ದಾಸರಹಳ್ಳಿ ವಲಯದಲ್ಲಿ 2014ರ ಮಾರ್ಚ್‌ನಿಂದ 2017ರ ಮಾರ್ಚ್‌ವರೆಗೆ ಕಸ ಸಂಗ್ರಹ, ವಿಲೇವಾರಿಗೆ ಕಾರ್ಮಿಕರೇ ಇರಲಿಲ್ಲ ಎಂದು ಹೇಳಿರುವುದು ತಪ್ಪು ಮಾಹಿತಿ. ಆರು ಸಾವಿರ ಪೌರ ಕಾರ್ಮಿಕರನ್ನು ಇಪಿಎಫ್‌ ಮತ್ತು ಎಂಪಿ ಕಾಯ್ದೆಯನುಸಾರ ನೋಂದಣಿ ಮಾಡಿಕೊಂಡಿಲ್ಲ. ಇದು ಅತ್ಯಂತ ಗಂಭೀರವಾದ ಲೋಪ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.