ಬೆಂಗಳೂರು: ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳಿಗೆ ಮೂಲಸೌಕರ್ಯಕ್ಕಾಗಿ ₹3 ಕೋಟಿ ಸಹಾಯಧನ ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ತಿಳಿಸಿದರು.
‘ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ 9ರಂದು ಬೆಂಗಳೂರಿನ ಪುರಭವನದಲ್ಲಿ ಎಫ್‌ಪಿಒಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದೂ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಸಾಲಿನಲ್ಲಿ ರಾಜ್ಯದಲ್ಲಿ 5 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಂತೆ ಸೂಚಿಸಿದ್ದಾರೆ. ಬಜೆಟ್‌ನಲ್ಲಿ ಇದಕ್ಕಾಗಿಯೇ ₹206 ಕೋಟಿ ಅನುದಾನ ಒದಗಿಸಲಾಗಿದೆ. ಪಿಎಂಎಫ್‌ಎಂಇ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಹೆಚ್ಚು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗುತ್ತಿದೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಎಫ್‌ಪಿಒ ಪ್ರತಿನಿಧಿಗಳು, ಬ್ಯಾಂಕ್, ನಬಾರ್ಡ್, ಎಸ್ಎಲ್‌ಬಿಸಿ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಎಫ್‌ಪಿಒಗಳು ತಮ್ಮ ಸದಸ್ಯರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮತ್ತು ಸಂಸ್ಕರಣೆಗೆ ಒಳಪಡಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಪಿಎಂಎಫ್ಎಂಇ ಯೋಜನೆಯಡಿ ಗರಿಷ್ಠ ₹15 ಲಕ್ಷ ಸಹಾಯ ಧನ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ₹6 ಲಕ್ಷ ನೀಡಿದರೆ, ರಾಜ್ಯ ಸರ್ಕಾರ ₹9 ಲಕ್ಷ ನೀಡುತ್ತದೆ. ಮೂಲಸೌಕರ್ಯ ಕಲ್ಪಿಸಿಕೊಳ್ಳಲು ಎಫ್‌ಪಿಒಗಳಿಗೆ ಗರಿಷ್ಠ ₹3 ಕೋಟಿವರೆಗೆ ಸಹಾಯಧನ ಸಿಗುತ್ತದೆ. ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಗೆ ಶೇ 50ರಷ್ಟು ಸಹಾಯಧನ ನೀಡಲಾಗುತ್ತದೆ’ ಎಂದು ತಿಳಿಸಿದರು.
‘ಸಮ್ಮೇಳನದಲ್ಲಿ ಪಿಎಂಎಫ್‌ಎಂಇ ಯೋಜನೆಯ ಸಮಗ್ರ ಮಾಹಿತಿ, ಎಫ್‌ಪಿಒಗಳು ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರಶ್ನೋತ್ತರ, ಸಂವಾದ ಇರಲಿದೆ. ಸಿರಿಧಾನ್ಯಗಳು, ಇತರೆ ಧಾನ್ಯಗಳು, ಹಣ್ಣು, ತರಕಾರಿ ಮತ್ತು ಪ್ಲಾಂಟೇಷನ್ ಬೆಳೆಗಳು, ಸಾಂಬಾರು ಪದಾರ್ಥಗಳನ್ನು ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ಮಾಡುವ ಕುರಿತು ತಾಂತ್ರಿಕ ಅಧಿವೇಶನಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.
7517 ಮಂದಿಗೆ ಸಹಾಯಧನ
ಪಿಎಂಎಫ್‌ಎಂಇ ಯೋಜನೆಯಡಿ ಇದುವರೆಗೂ 7517 ಫಲಾನುಭವಿಗಳು ಸಹಾಯಧನ ಪಡೆದಿದ್ದಾರೆ. ಈ ವರ್ಷ ಇನ್ನೂ 5 ಸಾವಿರ ಮಂದಿಗೆ ಸಹಾಯಧನ ನೀಡಲು ಗುರಿ ನಿಗದಿಪಡಿಸಲಾಗಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ವಿಶೇಷ ಅಭಿಯಾನ ನಡೆಯುತ್ತದೆ. ಈ ಯೋಜನೆಯಡಿ ಶೇ 47ರಷ್ಟು ಮಹಿಳೆಯರು ಸಹಾಯಧನ ಪಡೆದುಕೊಂಡು ಉದ್ದಿಮೆಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಇದನ್ನು ಶೇ 75ಕ್ಕೆ ಹೆಚ್ಚಿಸುವ ಉದ್ದೇಶವಿದೆ. ರಾಜ್ಯದಲ್ಲಿ ಒಟ್ಟು 1400ಕ್ಕೂ ಹೆಚ್ಚು ಎಫ್‌ಪಿಒಗಳಿದ್ದು ಇದರಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ 160 ಎಫ್‌ಪಿಒಗಳಿವೆ. ಇವು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ಸಿ.ಎನ್. ಶಿವಪ್ರಕಾಶ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.