ADVERTISEMENT

Modi in Bengaluru | ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಬ್ಯಾರಿಕೇಡ್ ಹಾರಿದ ಯುವಕ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 19:30 IST
Last Updated 10 ಆಗಸ್ಟ್ 2025, 19:30 IST
<div class="paragraphs"><p>ನಮ್ಮ ಮೆಟ್ರೋದ ಯೆಲ್ಲೋ ಲೈನ್‌ ಮತ್ತು ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದ ಹಿನ್ನಲೆಯಲ್ಲಿ ಅಭಿಮಾನಿಗಳು ಮೇಕ್ರಿ ವೃತ್ತದಲ್ಲಿ ನೆರವೇರಿದ್ದರು . <br></p></div>

ನಮ್ಮ ಮೆಟ್ರೋದ ಯೆಲ್ಲೋ ಲೈನ್‌ ಮತ್ತು ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದ ಹಿನ್ನಲೆಯಲ್ಲಿ ಅಭಿಮಾನಿಗಳು ಮೇಕ್ರಿ ವೃತ್ತದಲ್ಲಿ ನೆರವೇರಿದ್ದರು .

   

ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

  • ADVERTISEMENT

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಹಲವೆಡೆ ವಾಹನ ಸಂಚಾರ ನಿರ್ಬಂಧಿಸಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ, ಸವಾರರು ಪರದಾಡಿದರು.

‘ನಮ್ಮ ಮೆಟ್ರೊ’ ಹಳದಿ ಮಾರ್ಗದ ಉದ್ಘಾಟನೆಗಾಗಿ ಬಂದಿದ್ದ ನರೇಂದ್ರ ಮೋದಿ ಅವರನ್ನು ನೋಡಲು ಬೆಳಿಗ್ಗೆಯಿಂದಲೇ ಸಾವಿರಾರು ಜನರು ನಗರದ ಪ್ರಮುಖ ರಸ್ತೆಗಳಲ್ಲಿ ಜಮಾವಣೆಗೊಂಡಿದ್ದರು. ಪ್ರಧಾನಿ ಸಾಗುವ ಮಾರ್ಗ ಮಾತ್ರವಲ್ಲದೇ ವೇದಿಕೆ ಕಾರ್ಯಕ್ರಮ ನಡೆದ ಐಐಐಟಿ ಸಭಾಂಗಣದ ಸುತ್ತಮುತ್ತಲೂ  ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಭದ್ರತೆಯ ದೃಷ್ಟಿಯಿಂದ ಪೊಲೀಸರು 15 ಕಡೆ ವಾಹನಗಳ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮ ಮುಗಿಸಿ ಮೋದಿ ವಿಮಾನ ನಿಲ್ದಾಣ ಕಡೆಗೆ ತೆರಳುವ ವೇಳೆಗೆ ಮಧ್ಯಾಹ್ನ 3 ಗಂಟೆ ಆಗಿತ್ತು.

ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮಳೆಯೂ ಶುರುವಾಯಿತು. ಮೋದಿ ಅವರು ವಾಪಸ್‌ ತೆರಳುವ ಸಂದರ್ಭದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದರಿಂದ ಹೆಲಿಕಾಪ್ಟರ್‌ ಬದಲು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಕಾರಿನಲ್ಲೇ ತೆರಳಿದರು.

ಪ್ರಧಾನಿ ವಾಹನ ತೆರಳಿದ ಬಳಿಕ ಇತರೆ ವಾಹನಗಳು ಒಮ್ಮೆಗೇ ಹೊರ ಹೋಗಲು ಮುಂದಾದವು. ವಾಹನಗಳ ದಟ್ಟಣೆ ಜೊತೆಗೆ ಜನದಟ್ಟಣೆ ತೀವ್ರವಾಗಿತ್ತು. ವಾಹನಗಳು ಹಾಗೂ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಬೊಮ್ಮನಹಳ್ಳಿ ಮೇಲ್ಸೇತುವೆ, ಜಯನಗರ, ಮೇಖ್ರಿ ಸರ್ಕಲ್, ಎಲ್‌ಟಿಪಿ ರಸ್ತೆ, ಕಾಟ್‌ನಪೇಟೆ ಮುಖ್ಯ ರಸ್ತೆ, ಮೈಸೂರು ರಸ್ತೆ, ಮಾಗಡಿ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆ.ಜಿ.ಜಂಕ್ಷನ್, ರಾಜೀವ್ ಗಾಂಧಿ ಸರ್ಕಲ್, ಕನಕದಾಸ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಂಡು ಬಂತು.

ದ್ವಿಚಕ್ರ ವಾಹನ ಸವಾರರು ತೊಯ್ದುಕೊಂಡು ಹೋದರು. ಕೆಲವರು ಕೊಡೆ ಹಿಡಿದು ಸಾಗಿದರು. ಮತ್ತೆ ಕೆಲವರು ಕಟ್ಟಡ ಹಾಗೂ ಮರದ ಕೆಳೆಗೆ ಆಶ್ರಯ ಪಡೆದರು.

ಬ್ಯಾರಿಕೇಡ್ ಹಾರಿದ ಯುವಕ:

ಪ್ರಧಾನಿ ಮೋದಿ ಅವರು ಕೆಎಸ್‍ಆರ್ ರೈಲು ನಿಲ್ದಾಣದ ವೇದಿಕೆ ಕಾರ್ಯಕ್ರಮ ಮುಗಿಸಿ ಬೆಂಗಾವಲು ಪಡೆಯೊಂದಿಗೆ ಜೆ.ಪಿ.ನಗರದ ರಾಗಿಗುಡ್ಡ ಮೆಟ್ರೊ ನಿಲ್ದಾಣದತ್ತ ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗ ಸೌತ್ ಎಂಡ್ ವೃತ್ತದ ಬಳಿ ಯುವಕನೊಬ್ಬ ಬ್ಯಾರಿಕೇಡ್ ಹಾರಿ ರಸ್ತೆಗೆ ನುಗ್ಗಲು ಯತ್ನಿಸಿದ. ಇದರಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಯಿತು.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯುವಕನನ್ನು ತಡೆದು ವಶಕ್ಕೆ ತೆಗೆದುಕೊಂಡರು. ಬಳಿಕ ಆತನ ವಿಚಾರಣೆ ನಡೆಸಿ, ಬಿಟ್ಟು ಕಳುಹಿಸಿದರು.

‘ಮೋದಿ ಅವರನ್ನು ಹತ್ತಿರದಿಂದ ನೋಡುವ ಹುಮ್ಮಸ್ಸಿನಲ್ಲಿ ಯುವಕ, ಬ್ಯಾರಿಕೇಡ್ ದಾಟಿ ರಸ್ತೆಗೆ ಬರಲು ಯತ್ನಿಸಿದ್ದಾನೆ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ. ಯುವಕನ ಬಗ್ಗೆ ವಿಚಾರಣೆ ಮಾಡಿ ವೈಯಕ್ತಿಕ ಮಾಹಿತಿ ಕಲೆ ಹಾಕಲಾಗಿದೆ. ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಲಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಅವರ ಭದ್ರತೆಗಾಗಿ ನಗರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಎಲ್ಲೆಡೆ ಸರ್ಪಗಾವಲು ಹಾಕಲಾಗಿತ್ತು. ನಾಲ್ವರು ಜಂಟಿ ಪೊಲೀಸ್ ಆಯುಕ್ತರು, ಹತ್ತಕ್ಕೂ ಹೆಚ್ಚು ಉಪ ಪೊಲೀಸ್ ಆಯುಕ್ತರು, ಸಹಾಯಕ ಉಪ ಪೊಲೀಸ್ ಆಯುಕ್ತರು, ಇನ್‌ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿ, ಹದ್ದಿನ ಕಣ್ಣು ಇಟ್ಟಿದ್ದರು.  

ಹಲವರ ಬಂಧನ, ಬಿಡುಗಡೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಾರೆ ಎಂಬ ಶಂಕೆಯ ಮೇಲೆ ಎನ್‌ಎಸ್‌ಯುಐ ಪದಾಧಿಕಾರಿಗಳನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಪಿ.ಬಸವರಾಜು ಆರೋಪಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿ ಶುಕ್ರವಾರವಷ್ಟೇ ಕಾಂಗ್ರೆಸ್ ಪಕ್ಷವು ನಗರದಲ್ಲಿ ಪ್ರತಿಭಟನಾ ಸಮಾವೇಶ ಆಯೋಜಿಸಿತ್ತು. ಪದಾಧಿಕಾರಿಗಳು ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ವಶಕ್ಕೆ ಪಡೆದು, ಸಂಜೆ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ಮೂವರ ಬಂಧನ: ‘ರಾಗಿಗುಡ್ಡ ಮೆಟ್ರೊ ನಿಲ್ದಾಣ’ ಎಂದು ನಾಮ ಕರಣ ಮಾಡಿರುವುದನ್ನು ವಿರೋಧಿಸಿದ್ದ ಬಹುಜನ ಮಹಾ ಸಭಾ ಸಂಘಟನೆ ಕಾರ್ಯದರ್ಶಿ ಎಂ.ಪಿ.ನಂಜೇಶ್ ಕುಮಾರ್ ಸೇರಿ ಮೂವರನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದರು.

‘ಮಾರೇನಹಳ್ಳಿ ಮೆಟ್ರೊ ನಿಲ್ದಾಣ’ ಎಂದು ಘೋಷಿಸುವಂತೆ ಆಗ್ರಹಿಸಿ ಪದಾಧಿಕಾರಿಗಳು ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಸ್ಥಳೀಯ ಶಾಸಕ ಸಿ.ಕೆ.ರಾಮಮೂರ್ತಿ ಸಹ ಮಾರೇನಹಳ್ಳಿ ಗ್ರಾಮಸ್ಥರಿಗೆ ಬೆಂಬಲ ನೀಡಿದ್ದರು. ರಾಗಿಗುಡ್ಡ ಮೆಟ್ರೊ ನಿಲ್ದಾಣ ಎದುರು ಪ್ರತಿಭಟನೆಗೆ ಅನುಮತಿ ನೀಡುವಂತೆ ಕೋರಿ ಜೆ.ಪಿ.ನಗರ ಠಾಣೆಗೆ ತೆರಳಿದ್ದ ಸಂಘಟನೆಯ ಪದಾಧಿಕಾರಿಗಳಾದ ಎಂ.ಪಿ.ನಂಜೇಶ್ ಕುಮಾರ್, ಸುರೇಶ್, ಮಣಿಕಂಠ ಅವರನ್ನು ಮುನ್ನೆಚ್ಚರಿಕೆಯಾಗಿ ಬಂಧಿಸಿ, ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಶನಿವಾರ ರಾತ್ರಿ ಮೂವರನ್ನು ಹನುಮಂತ ನಗರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿತ್ತು. ಭಾನುವಾರ ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.