ADVERTISEMENT

ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ: ನಾಲ್ವರು ಪೆಡ್ಲರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 22:36 IST
Last Updated 3 ಜುಲೈ 2023, 22:36 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಬೆಂಗಳೂರು: ರಾಜ್ಯಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸಿ ಮಾರುತ್ತಿದ್ದ ನಾಲ್ವರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

‘ಮಹಾರಾಷ್ಟ್ರದ ಸೈಯದ್, ಅಮೂಲ್, ಆಕಾಶ್ ಹಾಗೂ ರಾಹುಲ್ ಬಂಧಿತರು. ಇವರಿಂದ ₹ 50 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಗಾಂಜಾ ಮಾರಾಟ ಜಾಲದ ಆರೋಪಿಯೊಬ್ಬನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಮಹಾರಾಷ್ಟ್ರದಿಂದ ಗಾಂಜಾ ತರುತ್ತಿದ್ದ ಬಗ್ಗೆ ಆತ ಮಾಹಿತಿ ನೀಡಿದ್ದ. ಪೆಡ್ಲರ್‌ಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡ, ಮಹಾರಾಷ್ಟ್ರ ಜಲನಾ ಜಿಲ್ಲೆಗೆ ಹೋಗಿತ್ತು. ಆರೋಪಿಗಳ ಮನೆಯಲ್ಲಿ ಪರಿಶೀಲನೆ ನಡೆಸಿತ್ತು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಕುಟುಂಬಸ್ಥರು ಪೊಲೀಸರ ಮೇಲೆ ಹಲ್ಲೆಗೂ ಯತ್ನಿಸಿದ್ದರು.’

‘ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು, ಅವರನ್ನು ಕರೆದುಕೊಂಡು ರಾಜ್ಯದತ್ತ ಪ್ರಯಾಣ ಬೆಳೆಸಿದ್ದರು. ಪೊಲೀಸರ ವಾಹನವನ್ನು ಬೆನ್ನಟ್ಟಿದ್ದ ಕುಟುಂಬಸ್ಥರು, ‘ನಮ್ಮ ಸಂಬಂಧಿಕರನ್ನು ಯಾರೋ ಅಪಹರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸಹ ವಾಹನ ಬೆನ್ನಟ್ಟಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರ ವಾಹನವನ್ನು ಅಡ್ಡಗಟ್ಟಲಾಗಿತ್ತು. ವಿಶೇಷ ತಂಡದಲ್ಲಿದ್ದ ಪೊಲೀಸರು, ಗಾಂಜಾ ಮಾರಾಟದ ಆರೋಪಿಗಳ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಪೊಲೀಸರ ತಂಡ ಆರೋಪಿ ಗಳ ಸಮೇತ ಬೆಂಗಳೂರಿಗೆ ಬಂದಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.