ADVERTISEMENT

ಮದ್ಯದಂಗಡಿಯಲ್ಲಿ ಕ್ಯಾಮೆರಾ; ನಿಯಮ ಉಲ್ಲಂಘಿಸಿದರೆ ಬಂದ್: ಕಮಿಷನರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2020, 16:43 IST
Last Updated 3 ಮೇ 2020, 16:43 IST
ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್
ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್   
""

ಬೆಂಗಳೂರು: ‘ಅಬಕಾರಿ ಆಯುಕ್ತರು ಹೊರಡಿಸಿರುವ ಆದೇಶದನ್ವಯ ಸಿಎಲ್‌–2 (ವೈನ್‌ ಶಾಪ್ ಹಾಗೂ ಎಂಆರ್‌ಪಿ) ಹಾಗೂ ಸಿಎಲ್–11 ಸಿ (ಎಂಎಸ್‌ಐಎಲ್) ಮಳಿಗೆಗಳನ್ನು ತೆರೆದು ಮದ್ಯ ಮಾರಾಟ ಮಾಡಬಹುದು. ಆರೋಗ್ಯ ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾಲಿಸದಿದ್ದರೆ, ಪ್ರಕರಣ ದಾಖಲಿಸಿಕೊಂಡು ಮದ್ಯದಂಗಡಿ ಬಂದ್ ಮಾಡಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರದಿಂದ ಮದ್ಯದಂಗಡಿಗಳು ತೆರೆಯಲಿದ್ದು, ನಿಗದಿತ ಅವಧಿಯಲ್ಲೇ ವಹಿವಾಟು ನಡೆಸಬೇಕು. ಅವಧಿ ಮೀರಿ ಮದ್ಯದಂಗಡಿ ತೆರೆಯುವಂತಿಲ್ಲ’ ಎಂದರು.

‘ಗ್ರಾಹಕರು ಕೈಗವಸು, ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದುಕೊಳ್ಳುವಂತೆ ಮಾಲೀಕರೇ ನೋಡಿಕೊಳ್ಳಬೇಕು. ಅದಕ್ಕಾಗಿ ಭಧ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಮದ್ಯದಂಗಡಿ ಆವರಣ ಕಾಣುವ ರೀತಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇರಬೇಕು. ಏನಾದರೂ ನಿಯಮ ಉಲ್ಲಂಘನೆಯಾದ ಮಾಹಿತಿ ಬಂದರೆ ಕ್ಯಾಮೆರಾ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದರು.

ADVERTISEMENT

‘ಗ್ರಾಹಕರು ಮದ್ಯ ಖರೀದಿಸಿ ಮನೆಗೆ ಹೋಗಬೇಕು. ರಸ್ತೆ ಅಥವಾ ಅಂಗಡಿ ಎದುರೇ ಕುಳಿತುಕೊಳ್ಳಬಾರದು’ ಎಂದರು.

ಗುರುತಿನ ಚೀಟಿ ಇಟ್ಟುಕೊಂಡು ಓಡಾಡಿ; ‘ಬಿಬಿಎಂಪಿ ಘೋಷಿಸಿರುವ 22 ನಿರ್ಬಂಧಿತ ವಲಯಗಳು ಹೊರತುಪಡಿಸಿ ಉಳಿದೆಲ್ಲ ಕಡೆ ರಾಜ್ಯ ಸರ್ಕಾರದ ವಿನಾಯಿತಿಗಳು ಅನ್ವಯಿಸುತ್ತವೆ. ಸೋಮವಾರದಿಂದ ಯಾವುದೇ ಪಾಸ್ ತಪಾಸಣೆ ಇರುವುದಿಲ್ಲ. ಆದರೂ ನಗರದಲ್ಲಿ ಭದ್ರತೆ ಬಿಗಿಯಾಗಲಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

‘ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುವುದು. ಚಾಲಕರು ಕಡ್ಡಾಯವಾಗಿ 30 ಕಿ.ಮೀ/ಗಂಟೆಗೆ ವೇಗದಲ್ಲಿ ವಾಹನ ಚಲಾಯಿಸಬೇಕು. ಇತರೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗುರುತಿನ ಚೀಟಿ ಇಟ್ಟುಕೊಂಡೇ ಓಡಾಡಬೇಕು’ ಎಂದೂ ತಿಳಿಸಿದರು.

‘ಮಾಲ್‌ಗಳು, ಚಿತ್ರಮಂದಿರಗಳು, ಜಿಮ್, ಈಜುಕೊಳ, ಕ್ರೀಡಾಂಗಣ, ಶಾಲಾ ಕಾಲೇಜು, ಶೈಕ್ಷಣಿಕ ಸಂಘ–ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು (ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಇತ್ಯಾದಿ), ಸಭೆ–ಸಮಾರಂಭ–ಪ್ರತಿಭಟನೆಗಳನ್ನು ಹಮ್ಮಿಕೊಳ್ಳದಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ’ ಎಂದರು.

‘ಅನಗತ್ಯವಾಗಿ ಸಾರ್ವಜನಿಕರು ಗುಂಪು ಸೇರಿ ನಿಷೇಧಾಜ್ಞೆ ನಿಯಮ ಉಲ್ಲಂಘಿಸಿದ್ದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.