
ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಿದ್ದ ಕಾರಿನಲ್ಲಿದ್ದ ₹11 ಲಕ್ಷ ಹಣ ಕದ್ದು ನಾಟಕವಾಡಿದ್ದ ಹೆಡ್ ಕಾನ್‌ಸ್ಟೆಬಲ್ ಜಬೀವುಲ್ಲಾ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೇಂದ್ರ ವಿಭಾಗದ ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ಉಮೇಶ್ ಅವರು ನೀಡಿದ ದೂರಿನ ಮೇರೆಗೆ ಜಬೀವುಲ್ಲಾ ಅವರು ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಇತ್ತೀಚೆಗೆ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಆಗಿತ್ತು. ವಂಚಕನ ಪತ್ತೆಗಾಗಿ ಆರ್‌ಎಸ್ಐ ಮಂಜುನಾಥ್ ನೇತೃತ್ವದ ತಂಡವನ್ನು ಇನ್‌ಸ್ಪೆಕ್ಟರ್ ಉಮೇಶ್ ರಚಿಸಿದ್ದರು. ಈ ತಂಡದಲ್ಲಿ ಆರೋಪಿತ ಹೆಡ್ ಕಾನ್‌ಸ್ಟೆಬಲ್ ಸಹ ಇದ್ದರು ಎಂದು ಮೂಲಗಳು ಹೇಳಿವೆ.
ಸೈಬರ್ ಅಪರಾಧ ಪ್ರಕರಣವೊಂದರಲ್ಲಿ ಬಂಧಿಸಲಾಗಿದ್ದ ಆರೋಪಿಯನ್ನು ಕಮಿಷನರ್ ಕಚೇರಿ ಆವರಣದಲ್ಲಿರುವ ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ವಿಚಾರಣೆಗೆಂದು ತನಿಖಾಧಿಕಾರಿಗಳು ಕರೆತಂದಿದ್ದರು. ಜಪ್ತಿ ಮಾಡಿಕೊಂಡಿದ್ದ ಆರೋಪಿಯ ಕಾರನ್ನು ಸಹ ತಂದಿದ್ದರು. ಆ ಕಾರಿನಲ್ಲಿದ್ದ ಹಣವನ್ನು ಜಬೀವುಲ್ಲಾ ಕಳ್ಳತನ ಮಾಡಿದ್ದರು. ಕಳ್ಳತನ ಮಾಡುತ್ತಿದ್ದ ದೃಶ್ಯ ಸೆರೆಯಾಗಿತ್ತು. ಅದನ್ನು ಆಧರಿಸಿ, ತನಿಖೆ ನಡೆಸಿದಾಗ ಜಬೀವುಲ್ಲಾ ಕೃತ್ಯ ಎಸಗಿರುವುದು ಸಾಬೀತಾಗಿತ್ತು ಎಂದು ತನಿಖಾ ಮೂಲಗಳು ಹೇಳಿವೆ.
‘ಕದ್ದ ಹಣದಿಂದ ಜಬೀವುಲ್ಲಾ ಅವರು ಪತ್ನಿಗೆ ಚಿನ್ನದ ಆಭರಣ ಮಾಡಿಸಿಕೊಟ್ಟಿದ್ದರು. ಉಳಿದ ಹಣವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.