ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವು ರಾಜಕೀಯ ಆಡುಂಬೊಲವಾಗಿ ಬದಲಾಯಿತು. ಬಿಜೆಪಿ, ಕಾಂಗ್ರೆಸ್ ಮೇಲಾಟದಲ್ಲಿ ಜಯಂತಿಯ ಉದ್ದೇಶ ಮರೆಗೆ ಸರಿಯಿತು.
ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ. ವೇಣುಗೋಪಾಲ ಅವರು ಉಪನ್ಯಾಸ ನೀಡುತ್ತಾ, ‘ಜನರಿಗೆ ತೊಂದರೆಯಾದಾಗ ದೇವರು ಅವತಾರ ತಾಳುತ್ತಾರೆ. ಈಗ ಆಳುತ್ತಿರುವ ನರೇಂದ್ರ ಮೋದಿಯವರು ಶ್ರೀಕೃಷ್ಣನ ಅವತಾರ’ ಎಂದು ಬಣ್ಣಿಸಿದರು.
ನಟಿ ತಾರಾ ಅನೂರಾಧ ಮಾತನಾಡುತ್ತಾ, ‘ನಾವು ಎಲ್ಲ ಪಕ್ಷದವರು ಇಲ್ಲಿದ್ದೇವೆ. ಇಲ್ಲಿ ಯಾರನ್ನೋ ಹೊಗಳಲು ಇಲ್ಲವೇ ತೆಗಳಲು ಬಂದಿಲ್ಲ. ನಮ್ಮ ಸರ್ಕಾರ ಇರುವಾಗ ತಾತಯ್ಯರ ಜಯಂತಿ ಜಾರಿಗೆ ಬಂದಿದ್ದು ನಿಜ. ಅದಕ್ಕಾಗಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಈಗಿನ ಸರ್ಕಾರ ಅದನ್ನು ಮುಂದುವರಿಸಿದೆ’ ಎಂದರು.
ಆನಂತರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮಾತನಾಡುವ ವೇಳೆ, ‘ನನ್ನ ಹೃದಯದಲ್ಲಿ ಶ್ರೀರಾಮ ಮತ್ತು ಸಿದ್ದರಾಮಯ್ಯ ಇಬ್ಬರೂ ಇದ್ದಾರೆ’ ಎಂದು ಹೇಳಿದಾಗ ‘ಕೈವಾರ ತಾತಯ್ಯ ಇಲ್ವ’ ಎಂದು ಸಭೆಯಲ್ಲಿದ್ದವರು ಪ್ರಶ್ನಿಸಿದರು. ‘ನಾನೇ ಕೈವಾರ ತಾತಯ್ಯ, ಈ ಸಮುದಾಯದ ಎಲ್ಲರೂ ಕೈವಾರ ತಾತಯ್ಯ’ ಎಂದು ಉತ್ತರಿಸಿದರು.
‘ಬಲಿಜ ಸಮಾಜದ ಅನೇಕರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರು ಬಲಿಜ ಸಮಾಜದ ಬಡ ಕುಟುಂಬಕ್ಕೆ ಕನಿಷ್ಠ ಎರಡು ಸೀಟು ಮೀಸಲಿಡಬೇಕು. ಸಮಾಜದವನ್ನು ‘2ಎ’ ವರ್ಗಕ್ಕೆ ಸೇರಿಸಲು ಹೋರಾಟ ಮಾಡುತ್ತೇನೆ. 25 ವರ್ಷಗಳ ನಂತರ ನಮ್ಮ ಸಮಾಜದವರೊಬ್ಬರು ರಾಜ್ಯವನ್ನು ಆಳಬೇಕು’ ಎಂದು ಪ್ರದೀಪ್ ಈಶ್ವರ್ ಆಶಯ ವ್ಯಕ್ತಪಡಿಸಿದರು.
‘ನೀವು ವೇದಿಕೆಯಲ್ಲಿ ಮಾತನಾಡುತ್ತೀರಿ. ಗ್ರೈನ್ ಮರ್ಚೆಂಟ್ ಬ್ಯಾಂಕ್ ಚುನಾವಣೆ ನಡೆದಾಗ ಬಲಿಜರನ್ನೇ ನನ್ನೆದುರು ನಿಲ್ಲಿಸಿ 2 ಮತಗಳಿಂದ ಸೊಲಿಸಿದ್ದೀರಿ’ ಎಂದು ವೇದಿಕೆಯ ಮುಂದಿದ್ದ ಪಿ.ಕೆ. ಸುರೇಶ್ ಆಕ್ಷೇಪ ವ್ಯಕ್ತಪಡಿಸಿದರು.
‘ನಾನು ಆಗಿದಿಂದ ನೋಡುತ್ತಾ ಇದ್ದೀನಿ. ಸರ್ಕಾರದ ಕಾರ್ಯಕ್ರಮ ಇದು. ಬಿಜೆಪಿ ಕಾರ್ಯಕ್ರಮವನ್ನಾಗಿ ಮಾಡಲು ಹೊರಟಿದ್ದೀರಿ. ಹಿಂದೆ ಮಾತನಾಡಿದವರೆಲ್ಲ ಬಿಜೆಪಿ ಗುಣಗಾನ ಮಾಡಿದ್ದಾರೆ. ಇಲ್ಲಿರುವುದು ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯ ಸರ್ಕಾರ. ಬಾಯಿ ಮುಚ್ಚಿ ಕೂತುಕೊಳ್ಳಿ’ ಎಂದು ಏರಿದ ದನಿಯಲ್ಲಿ ಪ್ರದೀಪ್ ಈಶ್ವರ್ ಹೇಳಿದರು.
ಮಧ್ಯ ಪ್ರವೇಶಿಸಿದ ಬಿಜೆಪಿ ಸಂಸದ ಪಿ.ಸಿ. ಮೋಹನ್, ‘ನೀವು ಸಿದ್ದರಾಮಯ್ಯನ ಬಗ್ಗೆ ಮಾತನಾಡುತ್ತೀರಿ ಎಂದಾದರೆ ಬಿಜೆಪಿ ಸಂಸದನಾದ ನಾನು ಇರಬೇಕಾ ಬೇಡ್ವಾ? ತಾತಯ್ಯ ಜಯಂತಿ ಆರಂಭಿಸಿದ್ದು ಬೊಮ್ಮಾಯಿ. ಸಮಾಜಕ್ಕೆ ಬೇಕಾದುದನ್ನು ಮಾಡಿದ್ದು ಬಿಜೆಪಿ. ನಿಮ್ಮ ಮಾತನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದರು.
ಸಮರ್ಥನೆ ಮಾಡಿಕೊಳ್ಳುವ, ದೂರುವ, ಸಮಾಧಾನ ಮಾಡುವ ಮಾತುಗಳಿಂದ ಸಭೆ ಗೊಂದಲದ ಗೂಡಾಯಿತು. ಪ್ರದೀಪ್ ಈಶ್ವರ್ ವೇದಿಕೆಯಿಂದ ಇಳಿದು ಹೋದರು.
ಬಳಿಕ ಮಾತನಾಡಿದ ಪಿ.ಸಿ. ಮೋಹನ್, ‘ಸಣ್ಣ ತಪ್ಪಾಗಿದೆ. ಇದಕ್ಕೆ ಕ್ಷಮೆ ಕೇಳುತ್ತೇನೆ. ಮುಂದೆ ಹೀಗಾಗದಂತೆ ಎಲ್ಲರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಪ್ರದೀಪ್ ಈಶ್ವರ್ ಏನೋ ಆವೇಶದಲ್ಲಿ ಮಾತನಾಡಿದ್ದಾರೆ. ನಾನು ಕೂಡ ಗಟ್ಟಿಯಾಗಿ ಉತ್ತರ ನೀಡಿದೆ. ಅವರು ಹೋಗಬಾರದಿತ್ತು. ಅವರು ಮಾತನಾಡುವಾಗ ನಾನೂ ಹೋಗಬಹುದಿತ್ತು. ತಾತಯ್ಯ ಅವರ ಜಯಂತಿ ಎಂಬ ಕಾರಣಕ್ಕೆ ಹೋಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.