ADVERTISEMENT

ಬೆಂಗಳೂರು | ಮತಗಟ್ಟೆಗಳು ಸಜ್ಜು, ಬೆಳಿಗ್ಗೆ 7ರಿಂದ ಮತದಾನ

5.30ರಿಂದ ಅಣಕು ಮತದಾನ; ಇವಿಎಂ ಸಮಸ್ಯೆಯಿದ್ದರೆ ಪರ್ಯಾಯ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 16:03 IST
Last Updated 25 ಏಪ್ರಿಲ್ 2024, 16:03 IST
ಚಾಮರಾಜಪೇಟೆಯ ಸರ್. ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಇವಿಎಂ ಯಂತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಚಾಮರಾಜಪೇಟೆಯ ಸರ್. ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಇವಿಎಂ ಯಂತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯ ಕೇಂದ್ರ, ಉತ್ತರ, ದಕ್ಷಿಣ ಲೋಕಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 8,984 ಮತಗಟ್ಟೆಗಳು ಸಜ್ಜಾಗಿವೆ.

ಮತದಾನ ಪ್ರಕ್ರಿಯೆ ಸುಗಮವಾಗಿರುವುದನ್ನು ಖಾತರಿಪಡಿಸಿಕೊಳ್ಳಲು ಶುಕ್ರವಾರ ಬೆಳಿಗ್ಗೆ 5.30ಕ್ಕೆ ಅಣಕು ಮತದಾನ ನಡೆಯಲಿದೆ. ಬೆಳಿಗ್ಗೆ 7ರಿಂದ ಮತದಾರರಿಗೆ ಮತದಾನಕ್ಕೆ ಅವಕಾಶವಿದ್ದು, ಸಂಜೆ 6ರವರೆಗೆ ಮತದಾನ ಮಾಡಬಹುದು.

ಎಲ್ಲಾ ಮತಗಟ್ಟೆ ಅಧಿಕಾರಿಗಳು ಗುರುವಾರ ಮಸ್ಟರಿಂಗ್ ಕೇಂದ್ರಗಳಿಗೆ ಬಂದು ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ತೆಗೆದುಕೊಂಡು ಬಿ.ಎಂ.ಟಿ.ಸಿ, ಕೆ.ಎಸ್‌.ಆರ್.ಟಿ.ಸಿ, ಇತರೆ ವಾಹನಗಳ ಮೂಲಕ ಪೊಲೀಸ್ ಬಂದೋಬಸ್ತ್‌ನಲ್ಲಿ ಮತಗಟ್ಟೆಗಳಿಗೆ ತೆರಳಿದ್ದಾರೆ. ಮತಗಟ್ಟೆಗಳಲ್ಲಿ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ‌‌ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ADVERTISEMENT

ಅಣುಕು ಮತದಾನದ ವೇಳೆ ಇವಿಎಂನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ‘ಮಾರ್ಗ ಅಧಿಕಾರಿ‘(ರೂಟ್‌ ಆಫೀಸರ್‌) ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿಯ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದ 3 ಲೋಕಸಭಾ ಕ್ಷೇತ್ರಗಳಲ್ಲಿ ವಿಷಯಾಧಾರಿತ ಮತಗಟ್ಟೆಗಳಾದ ಸಖಿ ಮತಗಟ್ಟೆ, ಯುವ ಮತಗಟ್ಟೆ, ಅಂಗವಿಕಲರ ಮತಗಟ್ಟೆ, ಅರಣ್ಯಾಧಾರಿತ ಮತಗಟ್ಟೆ, ಕರಗ ಮತಗಟ್ಟೆ, ಯಕ್ಷಗಾನ ಮತಗಟ್ಟೆ, ನೀರು ಉಳಿಸುವ ಕುರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಒಟ್ಟು 140 ಸಖಿ ಮತಗಟ್ಟೆಗಳು, 28 ಯುವ ಮತಗಟ್ಟೆಗಳು, 28 ಅಂಗವಿಕಲರ ಮತಗಟ್ಟೆಗಳು, 28 ಥೀಮ್‌ (ವಿಷಯಾಧಾರಿತ) ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಚಾಮರಾಜಪೇಟೆಯ ಸರ್. ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಿಂದ ಇವಿಎಂ ಯಂತ್ರಗಳನ್ನು ‍ಪಡೆದು ಮತಗಟ್ಟೆಗಳಿಗೆ ಕೊಂಡೊಯ್ದ ಚುನಾವಣಾ ಅಧಿಕಾರಿಗಳು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಬೆಂಗಳೂರಿನ ನ್ಯಾಷನಲ್ ಪ್ರೌಢ ಶಾಲೆಯ ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಅಧಿಕಾರಿಗಳು ಮತಯಂತ್ರ ಹಾಗೂ ಚುನಾವಣೆ ಸಾಮಗ್ರಿ ಪಡೆದು ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ‌ ಪ್ರಜಾವಾಣಿ ಚಿತ್ರ‌ ಪ್ರಶಾಂತ್ ಎಚ್.ಜಿ.
’ಕರಗ‘ ವಿಷಯಾಧಾರಿತ ಮತಗಟ್ಟೆ
ಸಖಿ ಮತಗಟ್ಟೆ
ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆ
ಮದುವೆ ವಿಷಯಾಧಾರಿತ ಮತಗಟ್ಟೆ
ಅರಣ್ಯ ವಿಷಯಾಧಾರಿತ ಮತಗಟ್ಟೆ

₹46.11 ಕೋಟಿ ಮೌಲ್ಯದ ವಸ್ತು ವಶ

ಲೋಕಸಭಾ ಚುನಾವಣೆ ಪ್ರಕಟವಾದ ಮಾರ್ಚ್‌ 16ರಿಂದ ಏಪ್ರಿಲ್‌ 25ರವರೆಗೆ ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಾಗಣೆ ಮಾಡುತ್ತಿದ್ದ ₹46.11 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ₹11.83 ಕೋಟಿ ನಗದು ₹19.20 ಕೋಟಿ ಮೌಲ್ಯದ 4.67 ಲಕ್ಷ ಲೀಟರ್‌ ಮದ್ಯ ₹7.15 ಕೋಟಿ ಮೌಲ್ಯದ 227 ಕೆ.ಜಿ ಮಾದಕ ವಸ್ತು ₹53.71 ಲಕ್ಷ ಮೌಲ್ಯದ 49.58 ಕೆ.ಜಿ ಚಿನ್ನ–ಬೆಳ್ಳಿ ಆಭರಣಗಳು ₹1.23 ಕೋಟಿ ಮೌಲ್ಯದ ಉಡುಗೊರೆ ₹6.14 ಕೋಟಿ ಮೌಲ್ಯದ ವಾಹನಗಳು ಸೇರಿದಂತೆ ₹46.11 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಪೊಲೀಸ್‌ ಠಾಣೆಯಲ್ಲಿ 129 ಅಬಕಾರಿ ಇಲಾಖೆಯಲ್ಲಿ 6423 ಪ್ರಕರಣ ಸೇರಿದಂತೆ 6552 ಎಫ್ಐಆರ್‌ಗಳನ್ನು ಈವರೆಗೆ ದಾಖಲಿಸಲಾಗಿದೆ ಎಂದು ಬಿಬಿಎಂಪಿಯ ವಿಶೇಷ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ನಗರ ಜಿಲ್ಲೆಯಲ್ಲಿರುವ ಮತದಾರರು

1,01,27,869; ಒಟ್ಟು ಮತದಾರರು

52,16,091; ಪುರುಷರು

49,09,958; ಮಹಿಳೆಯರು

1,820; ಇತರೆ

ಮತಗಟ್ಟೆಗಳು

8,984; ಒಟ್ಟು ಮತಗಟ್ಟೆಗಳು

2,003; ಸೂಕ್ಷ್ಮ ಮತಗಟ್ಟೆಗಳು

253; ಅತಿಸೂಕ್ಷ್ಮ ಮತಗಟ್ಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.