ADVERTISEMENT

ವಿದ್ಯುತ್‌ ಗ್ರಾಹಕರಿಗೆ ಮತ್ತೆ ಹೊರೆ: ₹3,353 ಕೋಟಿ ಸಂಗ್ರಹಕ್ಕೆ ಶಿಫಾರಸು

ಸಿಬ್ಬಂದಿ ನಿವೃತ್ತಿ ವೇತನ ಪಾವತಿ ಬಳಕೆದಾರರ ಹೆಗಲಿಗೆ?

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 20:26 IST
Last Updated 14 ಜನವರಿ 2023, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿದ್ಯುತ್‌ ನಿಗಮಗಳ ಸಿಬ್ಬಂದಿಯ ನಿವೃತ್ತಿ ವೇತನ ಪಾವತಿಯ ಹೊರೆಯನ್ನು ರಾಜ್ಯದ ಗ್ರಾಹಕರ ಮೇಲೆ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಆದೇಶಕ್ಕೆ ಗೃಹ, ವಾಣಿಜ್ಯ ಹಾಗೂ ಕೈಗಾರಿಕೆಗಳ ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

‘ದರ ಪರಿಷ್ಕರಣೆಯ ಅಂಶಗಳು ಜಾರಿಯಾದರೆ ಉದ್ದಿಮೆಗಳು ಬಾಗಿಲು ಬಂದ್‌ ಮಾಡುವ ಸ್ಥಿತಿ ಬರಲಿದೆ. ವಿದ್ಯುತ್‌ ಸರಬರಾಜು ಕಂಪನಿಗಳ ನಷ್ಟ ಸರಿದೂಗಿಸಿಕೊಳ್ಳಲು ಬಳಕೆದಾರರಿಗೆ ಬರೆ ಹಾಕುವುದು ಎಷ್ಟು ಸರಿ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಫ್‌ಕೆಕೆಸಿಐ) ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಪ್ರಶ್ನಿಸಿದರು.

‘ಹೊಸ ಆದೇಶದಂತೆ ವಾರ್ಷಿಕ ಮೂರು ಕಂತುಗಳಲ್ಲಿ ₹ 3,353 ಕೋಟಿಯನ್ನು ಗ್ರಾಹಕರೇ ಪಾವತಿಸುವ ಸ್ಥಿತಿ ಬರಲಿದೆ. ತಣ್ಣೀರುಬಾವಿ ವಿದ್ಯುತ್‌ ಯೋಜನೆಗೆ ಸಂಬಂಧಿಸಿದಂತೆ ₹ 1,657 ಕೋಟಿಯನ್ನು ಗ್ರಾಹಕರ ಮೂಲಕ ಸಂಗ್ರಹಿಸಲು ಆದೇಶಿಸಿದೆ. ರಾಜ್ಯದ ವಿದ್ಯುತ್‌ ಬಳಕೆದಾರರು ₹ 1,500 ಕೋಟಿ ಹಣ ಪಾವತಿಸಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಕರ್ನಾಟಕ ವಿದ್ಯುತ್‌ ನಿಯಂತ್ರಣಾ ಆಯೋಗದ (ಕೆಇಆರ್‌ಸಿ) ಎದುರು ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳು ನಾಲ್ಕು ಪ್ರಸ್ತಾವ ಸಲ್ಲಿಸಿವೆ. ಆ ಪ್ರಸ್ತಾವಕ್ಕೂ ಅನುಮತಿ ಸಿಕ್ಕಿದರೆ ಬಳಕೆದಾರರು ದುಪ್ಪಟ್ಟು ಶುಲ್ಕ ಪಾವತಿಸಬೇಕಿದೆ. ಬೇಡಿಕೆ, ನಿಗದಿತ ಶುಲ್ಕ ಹೆಚ್ಚಿಸಲು ಕೆಇಆರ್‌ಸಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಉದಾಹರಣೆಗೆ 100 ಕೆ.ವಿಗೆ ₹ 30 ಸಾವಿರ ಪಾವತಿಸುತ್ತಿದ್ದವರು ₹ 60 ಸಾವಿರ ಶುಲ್ಕ ಪಾವತಿಸುವ ಸಂದರ್ಭ ಎದುರಾಗಲಿದೆ. ಬೇಡಿಕೆಯಷ್ಟು ವಿದ್ಯುತ್‌ ಬಳಸದಿದ್ದರೂ ಹೆಚ್ಚಿನ ಶುಲ್ಕ ಪಾವತಿಸುವುದು ಅನಿವಾರ್ಯ ಆಗಲಿದೆ. ಮೊದಲೇ ನಷ್ಟದಲ್ಲಿರುವ ಕೈಗಾರಿಕೆಗಳು ಮತ್ತಷ್ಟು ಸಂಕಷ್ಟ ಎದುರಿಸಲಿವೆ. ನಿಗದಿತ ಶುಲ್ಕ ಹೆಚ್ಚಿಸಿದರೆ ಸಾಮಾನ್ಯ ಗ್ರಾಹಕನಿಗೆ ತೊಂದರೆಯಾಗಲಿದೆ’ ಎಂದು ಗೋಪಾಲರೆಡ್ಡಿ ಹೇಳಿದರು.

‘ವಿಶೇಷ ಪ್ರೋತ್ಸಾಹ ಯೋಜನೆ ವಾಪಸ್‌ ತೆಗೆದುಕೊಳ್ಳುವುದು ಹಾಗೂ ಗೃಹ ಬಳಕೆದಾರರಿಗೆ ನೀಡಿದ್ದ ಸೋಲಾರ್‌ ವಾಟರ್‌ ರಿಯಾಯಿತಿ ಯೋಜನೆ ಹಿಂಪಡೆಯುವ ಅಂಶಗಳು ಪ್ರಸ್ತಾವದಲ್ಲಿವೆ. ಇದಕ್ಕೆ ನಮ್ಮ ವಿರೋಧವಿದೆ’ ಎಂದರು.

‘ಉತ್ಪಾದನಾ, ಸೇವಾ ವಲಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಉತ್ಪಾದನಾ ಘಟಕಗಳು 15,147 (ಎಚ್‌ಟಿ) ಹಾಗೂ 5,35,220 ಸಣ್ಣ ಕೈಗಾರಿಕಾ ಘಟಕಗಳಿವೆ. ರಾಜ್ಯದ ವಿದ್ಯುತ್‌ ಬಳಕೆಯಲ್ಲಿ ಶೇ 3.20ರಷ್ಟನ್ನು ಸಣ್ಣ ಕೈಗಾರಿಕೆಗಳು ಬಳಸಿ, 40 ಲಕ್ಷ ಮಂದಿಗೆ ಉದ್ಯೋಗ ನೀಡಿವೆ. ಎಚ್‌.ಟಿ ಬಳಕೆದಾರರು ಶೇ 16.30ರಷ್ಟು ವಿದ್ಯುತ್‌ ಬಳಸುತ್ತಿದ್ದಾರೆ. ದರ ಏರಿಕೆಯಿಂದ ಉದ್ದಿಮೆ ಮುಚ್ಚುವ ಸ್ಥಿತಿ ಬರಲಿದೆ’ ಎಂದು ಹೇಳಿದರು.

‘ಉಚಿತ ವಿದ್ಯುತ್‌ ಬೇಕಿಲ್ಲ. ಕಡಿಮೆ ಬೆಲೆಯಲ್ಲಿ ನಿರಂತರ ಹಾಗೂ ಗುಣಮಟ್ಟ ವಿದ್ಯುತ್‌ ಪೂರೈಸಬೇಕು. ರಾಜ್ಯ ಸರ್ಕಾರದ ಈ ನಡೆಯಿಂದ ವಿದೇಶಿ ಕಂಪನಿಗಳು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕಲಿವೆ’ ಎಂದು ಸಂಸ್ಥೆಯ ಎಂ.ಜಿ.ಪ್ರಭಾಕರ್ ಹೇಳಿದರು.

ಸಣ್ಣ ಕೈಗಾರಿಕೆಗೆ ಜಾಗದ ಸಮಸ್ಯೆ
‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅನುಮತಿ ನೀಡಲು ಅವೈಜ್ಞಾನಿಕ ವಾಗಿ ಶುಲ್ಕ ನಿಗದಿ ಪಡಿಸುತ್ತಿದ್ದು, ಇದರಿಂದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ತೊಂದರೆ ಆಗುತ್ತಿದೆ’ ಎಂದು ಎಫ್‌ಕೆಸಿಸಿಐನ ಕೈಗಾರಿಕೆ ಸಮಿತಿ ಅಧ್ಯಕ್ಷ ಶಶಿಧರ್‌ ಹೇಳಿದರು.

‘ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಸಿಗುತ್ತಿಲ್ಲ. ಬ್ಯಾಂಕ್‌ಗಳೂ ಸಾಲ ಸೌಲಭ್ಯ ನೀಡುತ್ತಿಲ್ಲ. ಇದರಿಂದ ಕೈಗಾರಿಕಾ ವಲಯ ತೊಂದರೆ ಅನುಭವಿಸುತ್ತಿದೆ. ಆಸ್ತಿ ತೆರಿಗೆ ಹೆಚ್ಚಳದಿಂದಲೂ ತೊಂದರೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.