ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲಾಧಿಕಾರಿಗಳು ಕೈದಿ ಸಂಖ್ಯೆ 15528 ನೀಡಿದ್ದಾರೆ.
ಜೈಲಿನ ನಿಯಮಾನುಸಾರ ಬಿಳಿ ಬಟ್ಟೆ ಧರಿಸಿರುವ ಪ್ರಜ್ವಲ್‌ನನ್ನು ವಿಶೇಷ ಭದ್ರತಾ ಕೊಠಡಿಯಿಂದ ಸಜಾಬಂಧಿ ಬ್ಯಾರಕ್‌ಗೆ ಸ್ಥಳಾಂತರ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣಗೆ ಆಗಸ್ಟ್ 2ರಿಂದಲೇ ಶಿಕ್ಷೆ ಆರಂಭವಾಗಿದೆ. ಜೈಲು ನಿಯಮಾವಳಿ ಅನುಸಾರ ಕೈದಿಗಳು ಕಡ್ಡಾಯ 8 ಗಂಟೆ ಕೆಲಸ ಮಾಡಬೇಕು. ಪ್ರಮುಖವಾಗಿ ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಮರಗೆಲಸ, ಕರಕುಶಲ ವಸ್ತುಗಳ ಕೆತ್ತನೆ ಸೇರಿ ಯಾವುದಾದರೂ ಒಂದು ಕೆಲಸ ಮಾಡಬಹುದು. ಆಯ್ಕೆ ಮಾಡಿಕೊಂಡ ಕೆಲಸಕ್ಕೆ ಸಂಬಳ ನೀಡಲಾಗುತ್ತದೆ.
ರಾಜ್ಯದ ಜೈಲುಗಳಲ್ಲಿ ಕೌಶಲರಹಿತ ಕೈದಿಗಳಿಗೆ ದಿನಕ್ಕೆ ಒಟ್ಟು ₹524 ಸಂಬಳ ನಿಗದಿ ಮಾಡಲಾಗಿದೆ. ಒಂದು ವರ್ಷದ ನಂತರ, ಅವರು ನುರಿತ ಕೆಲಸಗಾರರಾಗುತ್ತಾರೆ. ಆ ಬಳಿಕ ದಿನಕ್ಕೆ ₹548 ಸಂಬಳ ನೀಡಲಾಗುತ್ತದೆ. ಎರಡು ವರ್ಷಗಳ ಅನುಭವದ ನಂತರ, ಕೌಶಲಪೂರ್ಣ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ. ಆಗ ಕೈದಿಗೆ ಸಿಗುವ ಸಂಬಳ ದಿನಕ್ಕೆ ₹615. ಮೂರು ವರ್ಷಗಳ ನಂತರ, ಅವರನ್ನು ಹೆಚ್ಚು ನುರಿತ ಅಥವಾ ತರಬೇತಿ ಕೆಲಸಗಾರರು ಎಂದು ಪರಿಗಣಿಸಿ ದಿನಕ್ಕೆ₹663 ಸಂಬಳ ನೀಡಲಾಗುವುದು.
‘ನ್ಯಾಯಾಲಯದ ತೀರ್ಪಿನ ಬಳಿಕ ಪ್ರಜ್ವಲ್ ಮೌನಕ್ಕೆ ಶರಣಾಗಿದ್ದು, ತಡರಾತ್ರಿವರೆಗೂ ಬ್ಯಾರಕ್‌ನಲ್ಲಿ ಚಿಂತೆಯಲ್ಲಿ ಮುಳುಗಿದ್ದರು. ಶನಿವಾರ ರಾತ್ರಿ ಊಟ ಸೇವಿಸಲಿಲ್ಲ. ವೈದ್ಯರು ಆರೋಗ್ಯ ತಪಾಸಣೆಗೆ ಬಂದಿದ್ದ ವೇಳೆ ಕಣ್ಣೀರು ಹಾಕಿದರು. ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ಎದ್ದು, ನಿತ್ಯಕರ್ಮ ಮುಗಿಸಿದರು. ಜೈಲು ಸಿಬ್ಬಂದಿ ನೀಡಿದ ಅವಲಕ್ಕಿ– ಉಪ್ಪಿಟ್ಟು ಸೇವಿಸಿದರು’ ಎಂದು ಮೂಲಗಳು ಹೇಳಿವೆ.
* ಪ್ರಜ್ವಲ್‌ಗೆ ದಿನಕ್ಕೆ 8 ತಾಸು ಕೆಲಸ ಕಡ್ಡಾಯ * ಕೆಲಸಕ್ಕೆ ಮೊದಲ ವರ್ಷ ದಿನಕ್ಕೆ ₹524 ಕೂಲಿ *ಎರಡನೇ ವರ್ಷದಲ್ಲಿ ₹548 ಕೂಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.