ADVERTISEMENT

ಶಾಲಾ ಹಂತದಲ್ಲಿಯೇ ರಂಗ ಶಿಕ್ಷಣ ಅಗತ್ಯ: ನಟ ಪ್ರಕಾಶ್ ರಾಜ್

ಬಹುರೂಪಿ ಫೌಂಡೇಷನ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 14:24 IST
Last Updated 6 ಜುಲೈ 2025, 14:24 IST
<div class="paragraphs"><p>ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಲಕ್ಷ್ಮಿ ಕರುಣಾಕರನ್‌, ನೆಲ್ಲುಕುಂಟೆ ವೆಂಕಟೇಶ್, ಪ್ರಕಾಶ್‌ ರಾಜ್ ಉಪಸ್ಥಿತರಿದ್ದರು </p></div>

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಲಕ್ಷ್ಮಿ ಕರುಣಾಕರನ್‌, ನೆಲ್ಲುಕುಂಟೆ ವೆಂಕಟೇಶ್, ಪ್ರಕಾಶ್‌ ರಾಜ್ ಉಪಸ್ಥಿತರಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಸೃಜನಶೀಲತೆ ಅನಾವರಣವಾಗುವ ಜತೆಗೆ ಬೌದ್ಧಿಕ ಸಾಮರ್ಥ್ಯ ವಿಕಾಸವಾಗುತ್ತದೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಈ ಶಿಕ್ಷಣ ನೀಡುವುದು ಉತ್ತಮ’ ಎಂದು ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.

ADVERTISEMENT

ಬಹುರೂಪಿ ಫೌಂಡೇಷನ್‌ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮಕ್ಕಳ ಲೋಕಕ್ಕೆ 14 ಪುಸ್ತಕಗಳ ಅರ್ಪಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ಮಕ್ಕಳು ಸಮಾಜದ ಒಂದು ಅಂಗವೆಂದು ನಾವು ಪರಿಗಣಿಸುತ್ತಿಲ್ಲ. ಮಕ್ಕಳ ಗ್ರಹಿಕೆ, ಕನಸು, ಗಮನಿಸುವ ರೀತಿಗಳನ್ನು ಅರ್ಥಮಾಡಿಕೊಂಡರೆ, ಮನುಕುಲದ ವಿಕಾಸ ಸಹಜವಾಗಿ ಆಗುತ್ತದೆ. ಅವರನ್ನು ಸ್ವಂತವಾಗಿ ಬೆಳೆಯಲು ಬಿಡಬೇಕು. ಅವರ ಕೂತುಹಲಗಳಿಗೆ ಬೆಲೆ ನೀಡಬೇಕು’ ಎಂದು ಹೇಳಿದರು. 

‘ಪ್ರಕೃತಿಯಲ್ಲಿ ಮಕ್ಕಳನ್ನು ಬೆಳೆಸುತ್ತೇವೆ ಎನ್ನುವುದು ಅಹಂಕಾರ, ಬೆಳೆಯಲು ಬಿಡುತ್ತೇವೆ ಎನ್ನುವುದು ವಿನಯ. ಇದು ಸ್ನೇಹ, ದಾಂಪತ್ಯ ಸೇರಿ ಎಲ್ಲ ಸಂಬಂಧಗಳಿಗೂ ಅನ್ವಯಿಸುತ್ತದೆ. ಮಕ್ಕಳಿಗೆ ಈಗ ನಾವು ಕಲಿಸುವ ವಿಚಾರದ ಪ್ರಸ್ತುತತೆ ಹತ್ತು ವರ್ಷದ ಬಳಿಕ ಹೇಗಿರುತ್ತದೆ ಎಂಬುದನ್ನು ಯೋಚಿಸಬೇಕಿದೆ. ಇವತ್ತಿನ ಶಿಕ್ಷಣ, ಟ್ಯೂಷನ್‌ ಮಕ್ಕಳಲ್ಲಿ ಆತ್ಮಹತ್ಯೆಯಂತಹ ಯೋಚನೆ ಹುಟ್ಟಿಸುತ್ತದೆ. ಸಾಹಿತ್ಯ, ರಂಗಭೂಮಿ, ಸಿನಿಮಾ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ನೆಲ್ಲುಕುಂಟೆ ವೆಂಕಟೇಶಯ್ಯ, ‘ಮಕ್ಕಳ ವಿಕಾಸಕ್ಕೆ ಬೇಕಾದ ವಾತಾವರಣ ಸಮಾಜದಲ್ಲಿ ಇಲ್ಲ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿನ ಜಾಗತಿಕ ಬೆಳವಣಿಗೆ ಮಕ್ಕಳ ಮನಸ್ಸನ್ನು ಕೆಡಿಸಿದೆ.‌ ಹೀಗಾಗಿ, ಅವರನ್ನು ಅರ್ಥೈಸಿಕೊಳ್ಳಲು ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಮಹಿಳಾ ಹಕ್ಕುಗಳ ಬಗ್ಗೆ ನಡೆದಷ್ಟು ಹೋರಾಟ ಮಕ್ಕಳ ಹಕ್ಕುಗಳ ಬಗ್ಗೆ ನಡೆದಿಲ್ಲ’ ಎಂದರು.

ಬಹುರೂಪಿ ಸಂಸ್ಥಾಪಕ ಜಿ.ಎನ್‌. ಮೋಹನ್‌, ‘ಮಕ್ಕಳ ಸಾಹಿತ್ಯ ಪುಸ್ತಕಗಳ ಆಕಾರ, ಅದರಲ್ಲಿನ ಕ್ರಿಯಾಶೀಲತೆಯನ್ನು ಕಾನೂನು ಉಲ್ಲಂಘನೆ ಎಂದು ಗ್ರಂಥಾಲಯಗಳು ಭಾವಿಸುತ್ತಿವೆ. ಇಂಥ ಕ್ಷುಲ್ಲಕ ವಿಚಾರಕ್ಕೆ ಪುಸ್ತಕಗಳನ್ನೇ ಕೊಳ್ಳುವುದಿಲ್ಲ. ಇದು ಬದಲಾಗದಿದ್ದಲ್ಲಿ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಯುವುದು ಹೇಗೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.