ಬೆಂಗಳೂರು: ‘ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಪಡಿಸಲು ಇರುವ ಕಾನೂನಿನ ತೊಡಕುಗಳನ್ನು ನಿವಾರಿಸುವ ಕುರಿತು ಮಂಗಳವಾರ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಬೇಕು’ ಎಂದು ಚಿತ್ರನಟ ಪ್ರಕಾಶ್ ರಾಜ್ ಮನವಿ ಮಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚನ್ನರಾಯಪಟ್ಟಣ ಸೇರಿದಂತೆ 13 ಹಳ್ಳಿಗಳ 1,777 ಎಕರೆ ಫಲವತ್ತಾದ ಜಮೀನು ಸ್ವಾಧೀನಕ್ಕೆ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಮುಂದಾಗಿತ್ತು. ಇದನ್ನು ವಿರೋಧಿಸಿ ನಡೆದ ಹೋರಾಟದಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಭಾಗವಹಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವ ಭರವಸೆ ನೀಡಿದ್ದರು. ಆದರೆ, ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ’ ಎಂದು ಹೇಳಿದರು.
‘ಭೂಸ್ವಾಧೀನ ವಿರೋಧಿಸಿ ಜೂನ್ 25ರಂದು ನಡೆದ ದೇವನಹಳ್ಳಿ ಚಲೋ ಹೋರಾಟವನ್ನು ರಾಜ್ಯ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡಿತು. ಇದನ್ನು ವಿರೋಧಿಸಿ, ಸಾಹಿತಿಗಳು, ರೈತ ಸಂಘಟನೆಗಳ ಹೋರಾಟಗಾರರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆಗ ಮಾತನಾಡಿದ್ದ ಸಿದ್ದರಾಮಯ್ಯ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಲು ಕಾನೂನಿನ ತೊಡಕುಗಳಿದ್ದು, ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಲು 10 ದಿನಗಳ ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ, ಈಗ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಭೂಸ್ವಾಧೀನ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಭೂಸ್ವಾಧೀನದ ವಿರುದ್ಧ ನಡೆಯುತ್ತಿರುವ ಚಳವಳಿಯಲ್ಲಿ ಒಡಕು ಮೂಡಿಸಲು ಸರ್ಕಾರ ಹತ್ತು ದಿನಗಳ ಕಾಲಾವಕಾಶ ಪಡೆದುಕೊಂಡಿತ್ತಾ? ಈ ಹತ್ತು ದಿನಗಳ ಮಧ್ಯದಲ್ಲಿ ಹೊಸದಾಗಿ ಹುಟ್ಟಿಕೊಂಡ ಕೆಲವು ದಲ್ಲಾಳಿಗಳು, ಅವರಿಗೆ ಬೇಕಾದಂತಹ ಪರಿಹಾರ ನಿಗದಿಪಡಿಸಿಕೊಳ್ಳುತ್ತಿದ್ದಾರೆ. ರೈತರು, ಬಡವರನ್ನು ದಾರಿ ತಪ್ಪಿಸುವ ಕೆಲಸವನ್ನು ಸರ್ಕಾರ ಕೈಬಿಡಬೇಕು’ ಎಂದರು.
ಎದ್ದೇಳು ಕರ್ನಾಟಕ ಕೇಂದ್ರ ಸಮಿತಿಯ ಸದಸ್ಯರಾದ ತಾರಾ ರಾವ್, ಕೆ.ಎಲ್. ಅಶೋಕ್, ಜೆ.ಎಂ. ವೀರಸಂಗಯ್ಯ ಸುದ್ದಿಗೋಷ್ಠಿಯಲ್ಲಿದ್ದರು.
ದೇವನಹಳ್ಳಿಯಲ್ಲಿ ಭೂಕಬಳಿಕೆ ವಿರುದ್ಧ ನಡೆಯುತ್ತಿರುವ ಬೀದಿ ಹೋರಾಟದ ಜೊತೆಗೆ ಕಾನೂನು ಹೋರಾಟವನ್ನು ಮುಂದುವರಿಸಲಾಗುವುದುಪ್ರಕಾಶ್ ರಾಜ್ ಚಲನಚಿತ್ರ ನಟ
‘ಹೈಕಮಾಂಡ್ ಮಧ್ಯಪ್ರವೇಶಕ್ಕೆ ಆಗ್ರಹ’:
ದೇವನಹಳ್ಳಿಯಲ್ಲಿನ ಬಲವಂತದ ಭೂಸ್ವಾಧೀನದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು. ರಾಜ್ಯ ಸರ್ಕಾರ ರೈತರ ಪರವಾಗಿ ಧೃಡ ನಿಲುವು ತೆಗೆದುಕೊಳ್ಳಲು ಸಹಕಾರಿಯಾಗಬೇಕು ಎಂದು ಸಂಯುಕ್ತ ಹೋರಾಟ–ಕರ್ನಾಟಕ ಆಗ್ರಹಿಸಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಸಂಯುಕ್ತ ಹೋರಾಟ–ಕರ್ನಾಟಕ ‘ರೈತರ ಪರವಾದ ನಿಲುವು ತೆಗೆದುಕೊಳ್ಳುವಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಒತ್ತಾಯಿಸಿದೆ. ‘ಈ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ರದ್ದುಪಡಿಸಲು ಕಾನೂನು ಸಲಹೆಗಳನ್ನು ಪಡೆಯಲು ಸರ್ಕಾರ ಏನು ಪ್ರಯತ್ನ ನಡೆಸುತ್ತಿದೆಯೋ ಗೊತ್ತಿಲ್ಲ. ಆದರೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಹೋರಾಟಗಾರರನ್ನು ಲೇವಡಿ ಮಾಡಿರುವುದು ಮಾತ್ರವಲ್ಲದೆ ದೇವನಹಳ್ಳಿಯ ಜಮೀನುಗಳನ್ನು ಸ್ವಾಧೀನದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ’ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ದಲಿತ ಸಂಘರ್ಷ ಸಮಿತಿಯ ಇಂದೂಧರ ಹೊನ್ನಾಪುರ ಸಿಐಟಿಯುನ ಎಸ್. ವರಲಕ್ಷ್ಮಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ದೂರಿದ್ದಾರೆ. ‘ದೇಶದ ಹಲವಾರು ರೈತ ಸಂಘಟನೆಗಳು ಈ ಚಳವಳಿಗೆ ಬೆಂಬಲ ಸೂಚಿಸಿವೆ. ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಪೂರ್ಣ ವಿಶ್ವಾಸ ಕಳೆದುಕೊಳ್ಳದೆ ಸಕಾರಾತ್ಮಕ ತೀರ್ಮಾನ ಹೊರಬರುತ್ತದೆ ಎಂದು ಕಾಯುತ್ತಿದ್ದೇವೆ. ನಮ್ಮೆಲ್ಲಾ ನಿರೀಕ್ಷೆಗಳು ಹುಸಿಯಾಗಿ ರೈತರ ಹಿತಕ್ಕೆ ವಿರುದ್ಧವಾಗಿ ಕಂಪನಿಗಳ ಪರ ನಿಲುವನ್ನೇ ಸರ್ಕಾರ ತೆಗೆದುಕೊಂಡರೆ ಈ ಚಳವಳಿ ಅಖಿಲ ಭಾರತ ಸ್ವರೂಪ ಪಡೆದುಕೊಳ್ಳಬಹುದು. ದೆಹಲಿಗೂ ತಲುಪಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.