ADVERTISEMENT

ಸೇಂಟ್ ಜೋಸೆಫ್ಸ್ ವಿ.ವಿ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:20 IST
Last Updated 28 ಸೆಪ್ಟೆಂಬರ್ 2022, 4:20 IST
ಶಾಂತಿನಗರದ ಲ್ಯಾಂಗ್‌ಫೋರ್ಡ್‌ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಕಟ್ಟಡ – ಪ್ರಜಾವಾಣಿ
ಶಾಂತಿನಗರದ ಲ್ಯಾಂಗ್‌ಫೋರ್ಡ್‌ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಕಟ್ಟಡ – ಪ್ರಜಾವಾಣಿ   

ಬೆಂಗಳೂರು: ರಾಷ್ಟ್ರೀಯ ಉಚ್ಚತಾ ಶಿಕ್ಷಣ ಅಭಿಯಾನದಡಿ ಉನ್ನತೀಕರಿಸಿದ ನಗರದ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಉದ್ಘಾಟಿಸಿದರು.

ಶಾಂತಿನಗರದ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿತು. ವಿಶ್ವವಿದ್ಯಾಲಯದ ಕಿರು ಪರಿಚಯದ ವಿಡಿಯೊವನ್ನು ಪ್ಲೇ ಮಾಡುವ ಮೂಲಕ ಉದ್ಘಾಟನೆ ನೆರವೇರಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು, ‘ಶಿಕ್ಷಣ ಕೇವಲ ಪಠ್ಯಕ್ಕಷ್ಟೇ ಸೀಮಿತವಾಗಬಾರದು. ಕಲೆ, ಸಂಸ್ಕೃತಿ, ಮಾನವೀಯ ಮೌಲ್ಯ, ನೈತಿಕತೆ, ಕೌಶಲ... ಹೀಗೆ ಎಲ್ಲ ಕ್ಷೇತ್ರದಲ್ಲೂ ವಿದ್ಯಾರ್ಥಿಗಳಿಗೆ ಜ್ಞಾನ ನೀಡಬೇಕು. ಈ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆಯಲ್ಲೇ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು’ ಎಂದರು.

ADVERTISEMENT

‘ದೇಶದ ಶಿಕ್ಷಣ ವ್ಯವಸ್ಥೆ ಬಲಪಡಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ದೇಶದ ಶಿಕ್ಷಣ ಸಂಸ್ಥೆಗಳು, ವಿಶ್ವದರ್ಜೆಯ ಕಲಿಕಾ ಕೇಂದ್ರಗಳಾಗಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿರುವ ನಾವು, ಮುಂದಿನ 25 ವರ್ಷಗಳ ನಂತರ ಶತಮಾನೋತ್ಸವ ಆಚರಿಸುತ್ತೇವೆ. ಈ ಸಮಯಕ್ಕೂ ಮೊದಲೇ ಶಿಕ್ಷಣದಲ್ಲಿ ಭಾರತ ಶಕ್ತಿಶಾಲಿ ದೇಶವಾಗಬೇಕು’ ಎಂದೂ ರಾಷ್ಟ್ರಪತಿ ಹೇಳಿದರು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ‘ಹಲವು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿರುವ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಹಬ್ ಆಗುತ್ತಿದೆ. ಸೇಂಟ್ ಜೋಸೆಫ್ಸ್ ಕಾಲೇಜು, ಇಂದು ವಿಶ್ವವಿದ್ಯಾಲಯ ಆಗುತ್ತಿರುವುದು ಖುಷಿ ಸಂಗತಿ. ಚರಿತ್ರೆ ಸೃಷ್ಟಿಸುವ ಹಾಗೂ ಮಾನಸಿಕ–ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಲಿ’ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಕ ಸಚಿವ ಸಿ.ಎನ್. ಅಶ್ವತ್ಥನಾರಾಯಣ, ಆರ್ಚ್ ಬಿಷಪ್ ಪೀಟರ್ ಮಚಾಡೊ, ವಿಶ್ವವಿದ್ಯಾಲಯದ ಕುಲಾಧಿಪತಿ ಡೈಯೊನಿಸಿಯಸ್ ವಾಜ್, ಸಹ ಕುಲಪತಿ ಸ್ವೇಬರ್ಟ್ ಡಿಸೆಲ್ವಾ ಹಾಗೂ ಕುಲಪತಿ ವಿಕ್ಟರ್ ಲೋಬೊ ಕಾರ್ಯಕ್ರಮದಲ್ಲಿದ್ದರು.

ಹೊಸ ಕ್ಯಾಂಪಸ್: ‘ಸೊಸೈಟಿ ಆಫ್ ಜೀಸಸ್ ಆಡಳಿತ ಮಂಡಳಿ ನಿರ್ವಹಣೆಯಲ್ಲಿ ವಿಶ್ವವಿದ್ಯಾಲಯ ಆರಂಭವಾಗಿದೆ. ವಿವಿಧ ವಿಭಾಗಗಳಲ್ಲಿ 8,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ದೊಡ್ಡ ಕ್ಯಾಂಪಸ್ ನಿರ್ಮಾಣ ಮಾಡುವ ಉದ್ದೇಶವಿದೆ’ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.