ಬೆಂಗಳೂರು: ಡೀಸೆಲ್ ದರ ಹೆಚ್ಚಳ, ತೆರಿಗೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ವೆಚ್ಚ ಅಧಿಕಗೊಂಡಿರುವುದರಿಂದ ಶಾಲಾ ವಾಹನಗಳ ಶುಲ್ಕವನ್ನು ಹೆಚ್ಚಿಸಲು ಖಾಸಗಿ ಶಾಲಾ ವಾಹನಗಳ ಚಾಲಕರ ಯೂನಿಯನ್ ನಿರ್ಧರಿಸಿದೆ.
ಡೀಸೆಲ್ ಪ್ರತಿ ಲೀಟರ್‌ಗೆ ₹ 2 ಹೆಚ್ಚಳವಾಗಿದೆ. ರಸ್ತೆ ತೆರಿಗೆ ಜಾಸ್ತಿ ಮಾಡಲಾಗಿದೆ. ಎಲ್ಲ ವಾಹನಗಳಲ್ಲಿ ಜಿಪಿಆರ್‌ಎಸ್ ಅಳವಡಿಸಬೇಕು. ಪ್ಯಾನಿಕ್ ಬಟನ್ ಅಳವಡಿಸಬೇಕು. ಕ್ಯಾಮೆರಾ ಅಳವಡಿಸಬೇಕು ಮುಂತಾದ ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಪಾಲನೆ ಮಾಡಬೇಕು. ಶಾಲಾ ವಾಹನಗಳ ಕಾರ್ಯಾಚರಣೆಗೆ ಸಾರಿಗೆ ಇಲಾಖೆಗೆ ಶುಲ್ಕ ಕಟ್ಟಿ ಅನುಮತಿ ಪಡೆಯಬೇಕು. ಇದರಿಂದ ವೆಚ್ಚ ವಿಪರೀತವಾಗಿದೆ ಎಂದು ಯೂನಿಯನ್ ಅಧ್ಯಕ್ಷ ಜಿ. ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು ನಗರ ವ್ಯಾಪ್ತಿಯಲ್ಲಿ 20 ಸಾವಿರ ಖಾಸಗಿ ಶಾಲಾ ವಾಹನಗಳಿವೆ. ವಾಹನಗಳ ಶುಲ್ಕವನ್ನು ನಾವು ಹೆಚ್ಚಿಸುತ್ತಿರಲಿಲ್ಲ. ಪ್ರತಿ ಬಾರಿ ಶೈಕ್ಷಣಿಕ ವರ್ಷ ಆರಂಭವಾದಾಗ ಪೋಷಕರೇ ₹ 100 ಹೆಚ್ಚಳ ಮಾಡಿ ನೀಡುತ್ತಿದ್ದರು. ಅದೇ ರೀತಿ ಪೋಷಕರು ಈ ಬಾರಿಯೂ ₹ 100 ಹೆಚ್ಚು ನೀಡಬಹುದು. ಆದರೆ, ಈಗಿನ ಖರ್ಚು ನೋಡಿದರೆ ಈ ಹೆಚ್ಚಳ ಸಾಕಾಗುವುದಿಲ್ಲ’ ಎಂದು ವಿವರಿಸಿದರು.
‘ಶಾಲೆಗಳದ್ದೇ ವಾಹನಗಳಲ್ಲಿ ₹ 2000–₹ 3000 ಇದೆ. ಖಾಸಗಿ ವಾಹನಗಳಲ್ಲಿ ತಿಂಗಳಿಗೆ ಒಂದು ಮಗುವಿಗೆ ಒಂದು ಕಿ.ಮೀ.ಗೆ ₹ 800–₹ 1000 ಇದೆ. ದೂರ ಹೆಚ್ಚಾದಂತೆ ಶುಲ್ಕ ಹೆಚ್ಚಾಗುತ್ತದೆ. ಈ ವರ್ಷದಿಂದ ತಿಂಗಳಿಗೆ ಹೆಚ್ಚುವರಿಯಾಗಿ ₹ 300ರಿಂದ ₹ 500 ಪಡೆಯಬೇಕಿದೆ’ ಎಂದು ಅವರು ಮಾಹಿತಿ ನೀಡಿದರು.
‘ಏ.15ರ ವರೆಗೆ ಏರಿಕೆ ಇಲ್ಲ’
ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಸುವ ಬಗ್ಗೆ ಏಪ್ರಿಲ್ 15ರವರೆಗೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಆನಂತರ ಈ ಬಗ್ಗೆ ಚರ್ಚಿಸಲಾಗುವುದು ಎಂದು ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ ಶರ್ಮ ತಿಳಿಸಿದ್ದಾರೆ. ‘ಡೀಸೆಲ್ ದರ ₹ 2 ಹೆಚ್ಚಳ ಮಾಡಿರುವುದನ್ನು ಕಡಿಮೆ ಮಾಡಬೇಕು ಎಂದು ಲಾರಿ ಮಾಲೀಕರ ಸಂಘ ಬೇಡಿಕೆ ಇರಿಸಿದೆ. ಏ.15ರ ಒಳಗೆ ಕಡಿಮೆ ಮಾಡದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಆ ಬಗ್ಗೆ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ. ಡೀಸೆಲ್ ದರ ಇಳಿಸಲು ತೀರ್ಮಾನ ಕೈಗೊಂಡರೆ ಬಸ್‌ಗಳ ಟಿಕೆಟ್ ದರ ಈಗಿನದ್ದೇ ಮುಂದುವರಿಯಲಿದೆ. ಇಲ್ಲದಿದ್ದರೆ ಆಗ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.