ಬೆಂಗಳೂರು: ಕೋವಿಡ್ ಎರಡನೇ ಅಲೆ ಅಧಿಕವಾಗಿದ್ದು, ಮೂರನೇ ಅಲೆ ಅಕ್ಟೋಬರ್ ವೇಳೆಗೆ ಬರುವ ಸಾಧ್ಯತೆ ಇರುವುದರಿಂದ ಖಾಸಗಿ ಶಾಲೆಗಳು 2021–22 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಜೂನ್– ಜುಲೈನಿಂದ ಆರಂಭಿಸಲು ನಿರ್ಧರಿಸಿವೆ.
ಎಲ್ಲ ತರಗತಿಗಳು ಆನ್‌ಲೈನ್ ಮೂಲಕವೇ ಆರಂಭವಾಗಲಿವೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಹೊಂದಿರುವ ಖಾಸಗಿ ಶಾಲೆಗಳು ಈ ಸಂಬಂಧ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ವಿಸ್ತೃತ ವೇಳಾ ಪಟ್ಟಿಯನ್ನು ಕಳುಹಿಸಿದ್ದು, ಜೂನ್ ಮೊದಲ ವಾರದಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ಶಾಲೆಗಳ ಹೊಸ ಶೈಕ್ಷಣಿಕ ವರ್ಷ ಜುಲೈ 15 ರಿಂದ ಆರಂಭವಾಗಲಿದೆ.
ಒಂದನೇ ಮತ್ತು ಮೇಲ್ಪಟ್ಟ ತರಗತಿಗಳಿಗೆ ಜೂನ್ 7 ರಿಂದ ಆನ್‌ಲೈನ್ ತರಗತಿಗಳು ಆರಂಭವಾಗಲಿದೆ. ಶಾಲೆಗಳು ಮೇಲ್ ಮೂಲಕ ಪೋಷಕರಿಗೆ ಸಂದೇಶವನ್ನು ಕಳುಹಿಸಿವೆ. ಮೇ 30 ರಂದು ಪೋಷಕರ ವರ್ಚುವಲ್ ಸಭೆಯನ್ನೂ ಕರೆಯಲಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಯೊಬ್ಬರು ಹೇಳಿದರು.
‘ಈ ಸಾಂಕ್ರಾಮಿಕ ಸಂದರ್ಭದಲ್ಲಿ ಆನ್‌ಲೈನ್ ಕಲಿಕೆಯೇ ಅತ್ಯುತ್ತಮ ಮಾರ್ಗ. ಇದಕ್ಕಾಗಿ ಹೈಬ್ರಿಡ್ ಕಲಿಕಾ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಲಿದ್ದೇವೆ. ಬೋಧಕ ಸಿಬ್ಬಂದಿಗೆ ಸೋಮವಾರದಿಂದ ಮತ್ತು ವಿದ್ಯಾರ್ಥಿಗಳಿಗೆ ಅತಿಶೀಘ್ರವೇ ಶೈಕ್ಷಣಿಕ ವರ್ಷ ಆರಂಭಿಸಲಾಗುವುದು. ಕ್ಯಾಂಪಸ್ ಕಲಿಕೆಗಿಂತ ಆನ್‌ಲೈನ್ ಕಲಿಕೆಗೆ ಉತ್ತಮ ರೇಟಿಂಗ್ ಸಿಕ್ಕಿತ್ತು’ ಎಂದು ಇನ್‌ವೆಂಚರ್ ಅಕಾಡೆಮಿಯ ಸಿಇಒ ನೂರಾನಿ ಫಝಲ್ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.