ADVERTISEMENT

ಬೆಂಗಳೂರು: ಶಿಲುಬೆಬೆಟ್ಟದ ಪವಿತ್ರ ಜಾತ್ರೆ ರದ್ದು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 10:28 IST
Last Updated 22 ಮಾರ್ಚ್ 2020, 10:28 IST

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ನಗರದ ಅರೆಹಳ್ಳಿ ಸಮೀಪದ ಶಿಲುಬೆ ಬೆಟ್ಟದಲ್ಲಿ (ಅಣ್ಣಮ್ಮ ಬೆಟ್ಟ) ಇದೇ 29ರಂದು ನಡೆಯಬೇಕಿದ್ದ ಕ್ರಿಸ್ತನ ಪವಿತ್ರ ಜಾತ್ರೆ ಕಾರ್ಯಕ್ರಮ ರದ್ದು ಪಡಿಸಲಾಗಿದೆ.

‘200 ವರ್ಷಗಳ ಇತಿಹಾಸವಿರುವ ಜಾತ್ರೆಯಲ್ಲಿ ಈ ಬಾರಿಬೆಂಗಳೂರು ಆರ್ಚ್‌ ಬಿಷಪ್‌ ಡಾ.ಪೀಟರ್ ಮಚಾದೊ ಹಾಗೂ ಚೆಂಗಲ್‌ಪೇಟೆಯ ಧರ್ಮಾಧ್ಯಕ್ಷ ನೀತಿನಾದನ್ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ದಿವ್ಯ ಬಲಿ ಪೂಜೆ, ವಿವಿಧ ಶಿಲುಬೆ ಹಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವೆ’ ಎಂದು ಸೇಂಟ್‌ಆ್ಯಂಟೋನಿ ಚರ್ಚ್‌ನ ಧರ್ಮಗುರು ಫಾ. ಎಸ್.ಬಾರ್ತೋಲೊಮಿಯೊ ತಿಳಿಸಿದರು.

‘ಜಾತ್ರೆಗೆ ಹೆಚ್ಚು ಜನ ಸೇರುತ್ತಾರೆ. ಈ ಸಂದರ್ಭದಲ್ಲಿ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.ಸಾರ್ವಜನಿಕರು ಸಹಕರಿಸಬೇಕು’ ಎಂದು ಜಾತ್ರೆಯ ಸಂಘಟನಾ ಸಮಿತಿ ಸದಸ್ಯ ಎ.ಮೈಕೆಲ್ ರಾಜ್ ತಿಳಿಸಿದ್ದಾರೆ.

ADVERTISEMENT

ಗಾಳಿ ಆಂಜನೇಯ ಸ್ವಾಮಿ–ರಥೋತ್ಸವ ರದ್ದು

ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇದೇ 28ರಿಂದ ಏಪ್ರಿಲ್ 10ರವರೆಗೆ ನಡೆಯಬೇಕಿದ್ದ ಬ್ರಹ್ಮರಥೋತ್ಸವವನ್ನು ಸರ್ಕಾರದ ಆದೇಶದ ಮೇರೆಗೆ ರದ್ದುಪಡಿಸಲಾಗಿದೆ ಎಂದು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್‌ ತಿಳಿಸಿದೆ.

ಪ್ರತಿ ವರ್ಷವೂ ಬ್ರಹ್ಮರಥೋತ್ಸವದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದರು. ಹೆಚ್ಚು ಜನ ಸೇರುವ ಕಡೆ ಕೊರೊನಾ ಸೋಂಕು ಹರಡುವ ಸಂಭವ ಇರುವುದರಿಂದ ಸರ್ಕಾರದ ಆದೇಶದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.