ಬೆಂಗಳೂರು: ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆ ಮುಕ್ತಾಯವಾಗಿದ್ದು, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
‘ಆಸ್ತಿ ತೆರಿಗೆ ಪಾವತಿ ಮಾಡದಿದ್ದವರಿಗೆ ಮೊದಲು ನೋಟಿಸ್ ಜಾರಿ ಮಾಡಲಾಗುತ್ತದೆ. ಆ ಅವಧಿಯಲ್ಲೂ ಪಾವತಿ ಮಾಡದಿದ್ದರೆ, ಬೀಗಮುದ್ರೆ ಹಾಕಿ ಮತ್ತೊಮ್ಮೆ ಗಡುವು ನೀಡಲಾಗುತ್ತದೆ. ಅದನ್ನೂ ಮೀರಿದರೆ ಆಸ್ತಿ ಮುಟ್ಟುಗೋಲು, ಹರಾಜು ಹಾಕಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.
ಒಟಿಎಸ್ ಯೋಜನೆಯ ಕೊನೆಯ ವಾರದಲ್ಲಿ ಸುಮಾರು ₹400 ಕೋಟಿ ತೆರಿಗೆ ಸಂಗ್ರಹವಾಗಿದೆ. ಮುಂದಿನ ತಿಂಗಳಲ್ಲಿ ಆರ್ಥಿಕ ವರ್ಷದ ಗುರಿ ₹5,210 ಕೋಟಿಯನ್ನು ಸಾಧಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಫೆಂಜಲ್ ಚಂಡಮಾರುತದ ಪರಿಣಾಮ ನಗರದಲ್ಲಿ ಮಳೆಯಾಗುತ್ತಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಸಮಸ್ಯೆಯಾಗುತ್ತಿದೆ. ಮಳೆ ನಿಂತ ಕೂಡಲೆ, ‘ಹಾಟ್ ಮಿಕ್ಸ್ ಪ್ಲಾಂಟ್’ನಿಂದ ಹೆಚ್ಚು ಡಾಂಬರನ್ನು ಪಡೆದು ಶೀಘ್ರಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಸಲಾಗಿದೆ ಎಂದು ಹೇಳಿದರು.
ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಸತೀಶ್, ಅರ್ಚನಾ, ರಮೇಶ್, ಗಿರೀಶ್, ಕರೀಗೌಡ, ರಮ್ಯಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಒಂದು ವಾರದಲ್ಲಿ ಇ–ಖಾತಾಗಳನ್ನು ವಿತರಿಸುವ ಉದ್ದೇಶದಿಂದ ಹೆಚ್ಚು ಸಹಾಯಕ ಕಂದಾಯ ಅಧಿಕಾರಿಗಳನ್ನು (ಎಆರ್‌ಒ) ನಿಯೋಜಿಸಿ ಕೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಲಯ ಆಯುಕ್ತರಿಗೆ ಸೂಚಿಸಿದ್ದಾರೆ.
ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಎಆರ್‌ಒಗಳ ಲಾಗಿನ್‌ನಲ್ಲಿ ಬಾಕಿಯಿರುವ ಇ-ಖಾತಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಲಯವಾರು ಹೆಚ್ಚುವರಿ ಎಆರ್‌ಒಗಳನ್ನು ನಿಯೋಜಿಸಿಕೊಳ್ಳಬೇಕು’ ಎಂದರು.
ಇ-ಖಾತಾ ವೆಬ್‌ಸೈಟ್‌ಗೆ 72.96 ಲಕ್ಷ ಹಿಟ್‌ಗಳು ಬಂದಿದ್ದು, 6 ಲಕ್ಷ ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದುವರೆಗೆ 21,369 ಅಂತಿಮ ಇ-ಖಾತಾ ನೀಡಲಾಗಿದ್ದು, ಎಆರ್‌ಒಗಳ ಲಾಗಿನ್‌ನಲ್ಲಿ ಸುಮಾರು 14 ಸಾವಿರ ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.