ADVERTISEMENT

667 ಪ್ರೌಢಶಾಲೆ ಮೇಲ್ದರ್ಜೆಗೇರಿಸಲು ಪ್ರಸ್ತಾವ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 15:49 IST
Last Updated 6 ಜುಲೈ 2023, 15:49 IST
ಮಧು ಬಂಗಾರಪ್ಪ 
ಮಧು ಬಂಗಾರಪ್ಪ    

ಬೆಂಗಳೂರು: ರಾಜ್ಯದ 667 ಸರ್ಕಾರಿ ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನಸಭೆಯಲ್ಲಿ ಗುರುವಾರ ಕಾಂಗ್ರೆಸ್‌ನ ಎಸ್‌.ಎನ್‌. ಸುಬ್ಬಾ ರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ‘667 ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಹಿಂದೆಯೇ  ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಕೋವಿಡ್‌ ಸಂಕಷ್ಟದ ಕಾರಣದಿಂದ ಆರ್ಥಿಕ ಇಲಾಖೆ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಈಗ ಪುನಃ ಪ್ರಸ್ತಾವ ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು’ ಎಂದರು.

‘ಕೋವಿಡ್‌ ನಂತರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ. ಪಿಯು ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ. ಕಾಲೇಜುಗಳ ಸಂಖ್ಯೆ ಕಡಿಮೆ ಇರುವುದರಿಂದ ತೀವ್ರ ಸಮಸ್ಯೆ ಆಗುತ್ತಿದೆ. ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ’ ಎಂದು ಸುಬ್ಬಾ ರೆಡ್ಡಿ ಮನವಿ ಮಾಡಿದರು.

ADVERTISEMENT

ಅನುಮತಿ ಸಿಕ್ಕ ತಕ್ಷಣ ಆದೇಶ: ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಿರುವ ಕುರಿತು ಬಿಜೆಪಿಯ ಬಿ.ವೈ. ವಿಜಯೇಂದ್ರ ಮತ್ತು ಮಹೇಶ್‌ ಟೆಂಗಿನಕಾಯಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮಧು, ‘ನ್ಯಾಯಾಲಯದ ನಿರ್ಬಂಧ ಇರುವುದರಿಂದ ನೇಮಕಾತಿ ಆದೇಶ ನೀಡಿಲ್ಲ. ನ್ಯಾಯಾಲಯ ಒಪ್ಪಿಗೆ ನೀಡಿದ ತಕ್ಷಣವೇ ನೇಮಕಾತಿ ಆದೇಶ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.