ADVERTISEMENT

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ: ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 19:29 IST
Last Updated 6 ಜನವರಿ 2020, 19:29 IST

ಬೆಂಗಳೂರು: ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕೇಂದ್ರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹಿಮಾಚಲ ಪ್ರದೇಶದ ಇಬ್ಬರನ್ನು ಬಂಧಿಸಿ, ಆರು ಯುವತಿಯರನ್ನು ರಕ್ಷಿಸಿದ್ದಾರೆ.

ಹಿಮಾಚಲ ಪ್ರದೇಶದ ಸಾಮ್ರಾಟ್ ಠಾಕೂರ್ (25), ರಾಕೇಶ್ ಬುದ್ದೀವಾಲ್ (22) ಬಂಧಿತರು. ಸಿದ್ದು ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳಿಂದ ₹ 13,500 ನಗದು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಈಜೀಪುರದ ಶಾಂತಿಕ್ಲಾರಾ ಕಟ್ಟಡದಲ್ಲಿದ್ದ ಇಕೋ ಬಾಡಿ ಸ್ಪಾನಲ್ಲಿ ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಆಮಿಷ ಒಡ್ಡಿ ಯುವತಿಯರನ್ನು ವೇಶ್ಯಾವಾಟಿಕೆ ವೃತ್ತಿಗೆ ಆರೋಪಿಗಳು ತಳ್ಳಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಸಾರ್ವಜನಿಕರು ವಾಸವಿರುವ ಪ್ರದೇಶದಲ್ಲಿ ವೇಶ್ಯಾವಾಟಿಕೆ ಹಾಗೂ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ, ಈ ಬಗ್ಗೆ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಇಂಥ ಅಡ್ಡೆ ಮೇಲೆ ದಾಳಿ ನಡೆಸಿ ಕಠಿಣ ಕ್ರಮಕೈಗೊಳ್ಳುತ್ತೇವೆ. ಸಾರ್ವಜನಿಕರು ದೂರು ನೀಡಿ ಸಹಕರಿಸಬೇಕು’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಸಂದೀಪ್ ಪಾಟೀಲ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.