ADVERTISEMENT

Video | ಘರ್ಷಣೆ: ವೈದ್ಯನಿಗೆ ಪೊರಕೆಯಿಂದ ಹೊಡೆದ ಪೌರಕಾರ್ಮಿಕರು

ಅತ್ತಿಗುಪ್ಪೆ: ಮನೆ ಎದುರು ಕಸ ಸುರಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 7:29 IST
Last Updated 19 ಮಾರ್ಚ್ 2020, 7:29 IST
ಅತ್ತಿಗುಪ್ಪೆ ವಾರ್ಡ್‌ನಲ್ಲಿ ಸ್ಥಳೀಯರು–ಪೌರ ಕಾರ್ಮಿಕರ ನಡುವೆ ಘರ್ಷಣೆ
ಅತ್ತಿಗುಪ್ಪೆ ವಾರ್ಡ್‌ನಲ್ಲಿ ಸ್ಥಳೀಯರು–ಪೌರ ಕಾರ್ಮಿಕರ ನಡುವೆ ಘರ್ಷಣೆ   

ಬೆಂಗಳೂರು: ಅತ್ತಿಗುಪ್ಪೆ ವಾರ್ಡ್‌ನ ನೇತಾಜಿ ಬಡಾವಣೆಯಲ್ಲಿ ಸ್ಥಳೀಯರು ಹಾಗೂ ಪೌರಕಾರ್ಮಿಕರ ನಡುವೆ ಗುರುವಾರ ಬೆಳಿಗ್ಗೆ ಘರ್ಷಣೆ ನಡೆಯಿತು.

ಪೌರಕಾರ್ಮಿಕರೊಬ್ಬರ ಮೇಲೆ ಸ್ಥಳೀಯ ನಿವಾಸಿಯಾಗಿರುವ ವೈದ್ಯರೊಬ್ಬರು ಹಲ್ಲೆ ನಡೆಸಿದ್ದಲ್ಲದೇ ಅವರನ್ನು ಅವಾಚ್ಯವಾಗಿ ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ವಾರ್ಡ್‌ನ ಪೌರಕಾರ್ಮಿಕರೆಲ್ಲ ಕೆಲಸ ಸ್ಥಗಿತಗೊಳಿಸಿ ವೈದ್ಯರ ಮನೆ ಮುಂದೆ ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಥಳೀಯರು ಹಾಗೂ ಕಾರ್ಮಿಕರ ನಡುವೆ ಮಾತಿಗೆ ಮಾತು ಬೆಳೆದು ವೈದ್ಯರಿಗೆ ಪೌರಕಾರ್ಮಿಕರು ಹಿಡಿಸೂಡಿಯಿಂದ (ಪೊರಕೆ) ಹಲ್ಲೆ ನಡೆಸಿದರು.ವೈದ್ಯರ ಅಂಗಿಗಳನ್ನೂ ಹರಿದುಹಾಕಿದರು. ಜಗಳವನ್ನು ತಪ್ಪಿಸಲು ಬಂದವರ ಮೇಲೂ ಹಲ್ಲೆ ನಡೆಸಿದರು. ಆಟೊಟಿಪ್ಪರ್‌ನಲ್ಲಿ ಕಸವನ್ನು ತಂದು ಅವರ ಮನೆ ಮುಂದೆಯೇ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಪಾಲಿಕೆ ಸದಸ್ಯ ಡಾ.ರಾಜು, ‘ಕಸವನ್ನು ಸರಿಯಾಗಿ ವಿಲೇವಾರಿ ಮಾಡಿಲ್ಲ ಎಂಬ ಕಾರಣಕ್ಕೆ ವೈದ್ಯರೊಬ್ಬರು ತಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ ಪೌಕಾರ್ಮಿಕರು ಸಿಟ್ಟಾಗಿದ್ದರು. ಎರಡೂ ಕಡೆಯವರನ್ನು ಸಮಾಧಾನಪಡಿಸಿ ವಿವಾದವನ್ನು ಇತ್ಯರ್ಥಪಡಿಸಿದ್ದೇವೆ’ ಎಂದರು.

ADVERTISEMENT

(ವಿಡಿಯೊ)

‘ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಕೊಡುಗೆ ಮಹತ್ವದ್ದು ಅವರ ಶ್ರಮವನ್ನು ನಾವು ಗೌರವಿಸಬೇಕು. ವೈದ್ಯರ ಮನೆ ಮುಂದೆ ಸುರಿದಿರುವ ಕಸವನ್ನು ತೆಗೆಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಪಾಲಿಕೆಯ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್‌ ಖಾನ್‌, ‘ಪೌರಕಾರ್ಮಿಕರು ಹಾಗೂ ಸ್ಥಲೀಯರ ನಡುವೆ ಘರ್ಷಣೆ ನಡೆಸ ಮಗ್ಗೆ ಈಗಷ್ಟೇ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.