ADVERTISEMENT

ರೋಗಿಗಳ ಮೇಲಿನ ನಿಗಾಕ್ಕೆ ನಿಯಂತ್ರಣ ಕೊಠಡಿ

ಕೋವಿಡ್‌–19: ಬಿಬಿಎಂಪಿಗೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 22:45 IST
Last Updated 11 ಆಗಸ್ಟ್ 2020, 22:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೋವಿಡ್‌ ಆಸ್ಪತ್ರೆಗಳು ಮತ್ತು ರೋಗಿಗಳ ಮೇಲೆ ನಿಗಾ ಇಡಲು ಮೇಲ್ವಿಚಾರಣಾ ನಿಯಂತ್ರಣ ಕೊಠಡಿಯೊಂದನ್ನು ಸ್ಥಾಪಿಸಬೇಕು ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ ಮಾತನಾಡಿದಪಿಎಸಿ ಅಧ್ಯಕ್ಷ ಎಚ್‌.ಕೆ.ಪಾಟೀಲ, ‘ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ನಿಯಂತ್ರಣ ಕೊಠಡಿಯಿಂದ ಸಾಧ್ಯ’ ಎಂದು ಹೇಳಿದರು.

ಆಸ್ಪತ್ರೆಗಳಿಗೆ ದಾಖಲಾದ ಕೋವಿಡ್‌ ರೋಗಿಗಳಿಗೆ ವೈದ್ಯರು ಮತ್ತು ಸಿಬ್ಬಂದಿ ಕಾಳಜಿಯಿಂದ ನೋಡಿಕೊಳ್ಳುತ್ತಿಲ್ಲ ಎಂಬ ದೂರುಗಳು ಬಂದಿವೆ. ಪ್ರತಿಯೊಂದು ಆಸ್ಪತ್ರೆಯ ವಾರ್ಡ್‌ಗಳು ಮತ್ತು ಹಾಸಿಗೆಗಳಿಗೆ 360 ಡಿಗ್ರಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಎಲ್ಲ ಕೋವಿಡ್‌ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಮಾಡಬೇಕು. ನಿಯಂತ್ರಣ ಕೊಠಡಿಯಿಂದ ಪ್ರತಿಯೊಬ್ಬ ರೋಗಿಯ ಮೇಲೂ ನಿಗಾ ಇಡಬೇಕು ಎಂದು ಹೇಳಿದರು.

ADVERTISEMENT

ಕೋವಿಡ್‌ನಿಂದ ಮೃತಪಡುವವರ ವಿಚಾರಕ್ಕೆ ಸಂಬಂಧಿಸಿದಂತೆ ಸಾವಿನ ಲೆಕ್ಕಪರಿಶೋಧನೆ (ಡೆತ್ ಆಡಿಟ್) ನಡೆಸಬೇಕು. ಕೋವಿಡ್‌ನಿಂದ ಮೃತಪಟ್ಟವರ ಮುಖ ನೋಡಲು ಕುಟುಂಬದ ಸದಸ್ಯರಿಗೆ ಅವಕಾಶ ನೀಡುತ್ತಿಲ್ಲ. ಮುಸ್ಲಿಮರು ಮೃತರ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಹೀಗಾಗಿ ಕೊನೆ ಬಾರಿ ಶವದ ಮುಖ ದರ್ಶನಕ್ಕೆ ಪಾರದರ್ಶಕ ಬಟ್ಟೆ ಹಾಕಿ ನೋಡಲು ಅವಕಾಶ ಮಾಡಿಕೊಡಬೇಕು ಎಂದು ಪಾಟೀಲ ಹೇಳಿದರು.

ಕೈ–ಕಾಲು ಕಟ್ಟಿ ಚಿಕಿತ್ಸೆ: ಐಸಿಯುನಲ್ಲಿರುವ ರೋಗಿಗಳು ಎದ್ದು ಓಡಾಡದಂತೆ ಕಟ್ಟಿ ಹಾಕಲಾಗುತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಶಾಸಕರಾದ ವೈ.ಎ.ನಾರಾಯಣಸ್ವಾಮಿ ಮತ್ತು ಕೆ.ಆರ್‌.ರಮೇಶ್‌ಕುಮಾರ್‌ ಆರೋಪ ಮಾಡಿದರು. ಈ ವಿಷಯವನ್ನು ಪರಿಶೀಲಿಸಿ ವಿವರವಾದ ಮಾಹಿತಿ ನೀಡುವುದಾಗಿ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಸಭೆಗೆ ತಿಳಿಸಿದರು.

15 ದಿನಗಳಲ್ಲಿ ಕೋವಿಡ್‌ ಕೇರ್‌ ನಿಯಂತ್ರಣ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾಡಿರುವ ಸಮಗ್ರ ವ್ಯವಸ್ಥೆಯ ಮಾಹಿತಿಯನ್ನು ದೈನಂದಿನ ಆಧಾರದಲ್ಲಿ ನೀಡಬೇಕು ಎಂದು ಎಚ್‌.ಕೆ.ಪಾಟೀಲ ಸೂಚಿಸಿದರು.

‘ಆರೈಕೆ ಕೇಂದ್ರ– ಉತ್ಸಾಹ ಬತ್ತಿದ್ದು ಏಕೆ’
‘ಕೋವಿಡ್‌ ಆರೈಕೆ ಕೇಂದ್ರಗಳ ಬಗ್ಗೆ ಏಕೆ ಆಸಕ್ತಿ ಕಳೆದುಕೊಂಡಿದ್ದೀರಿ. ಹಿಂದೆ ಬಾಡಿಗೆ ಆಧಾರದ ಮೇಲೆ ಉಪಕರಣಗಳನ್ನು ತರಿಸುವ ಸಂದರ್ಭದಲ್ಲಿ ತೋರಿಸುತ್ತಿದ್ದ ಉತ್ಸಾಹ ಈಗ ಏಕೆ ಇಲ್ಲ’ ಎಂದು ಎಚ್‌.ಕೆ. ಪಾಟೀಲ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಬಾಡಿಗೆಗೆ ತರುವುದು ಬೇಡ, ಎಲ್ಲವನ್ನು ಖರೀದಿಸಿ ಎಂದು ಮುಖ್ಯಮಂತ್ರಿಯವರು ಹೇಳಿದ ಬಳಿಕ ನಿಮ್ಮ ಉತ್ಸಾಹ ಬತ್ತಿ ಹೋಯಿತೆ? ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 15 ಜನರಿಗೆ ಒಂದು ಶೌಚಾಲಯ ವ್ಯವಸ್ಥೆ ಇದೆ. ಇದರಿಂದ ರೋಗಿಗಳಿಗೆ ತೊಂದರೆ ಆಗಿದೆ. ನಿಮ್ಮ ಮನೆಗಳಲ್ಲಿ ಈ ರೀತಿ ಬಳಸುತ್ತೀರಾ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಲ್ಯಾಣ ಮಂಟಪದಲ್ಲಿ ಒಪಿಡಿ
ಕೋವಿಡೇತರ ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಅಪೋಲೊ ಆಸ್ಪತ್ರೆಯ ಜಯನಗರ ಶಾಖೆಯು ಕಲ್ಯಾಣ ಮಂಟಪದಲ್ಲಿ ಹೊರರೋಗಿ ವಿಭಾಗ (ಒಪಿಡಿ) ಪ್ರಾರಂಭಿಸಿದೆ.

‘ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕೋವಿಡ್‌ನಿಂದಾಗಿ ಚಿಕಿತ್ಸೆ ಪಡೆಯಲು ಸಮಸ್ಯೆಯಾಗುತ್ತಿದೆ. ಹಾಗಾಗಿ ಆಸ್ಪತ್ರೆಯ ಎದುರು ಇರುವ ಮದುವೆ ಸಭಾಂಗಣವನ್ನು ಒಪಿಡಿಯಾಗಿ ಪರಿವರ್ತಿಸಿದ್ದೇವೆ. ಅಲ್ಲಿ ಪ್ರಯೋಗಾಲಯವನ್ನೂ ಸ್ಥಾಪಿಸಲಾಗಿದೆ. ಅಲ್ಲಿ ತುರ್ತು ಚಿಕಿತ್ಸೆ ಸೇರಿದಂತೆ ಎಲ್ಲ ಬಗೆಯ ಸೇವೆ ಒದಗಿಸಲಾಗುವುದು’ ಎಂದು ಶಾಖೆಯ ಮುಖ್ಯಸ್ಥ ಡಾ. ಯತೀಶ್ ಗೋವಿಂದಯ್ಯ ತಿಳಿಸಿದ್ದಾರೆ.

ಪಾಲಿಕೆ ಸದಸ್ಯ ಶಿವರಾಜುಗೆ ಕೋವಿಡ್‌
ಬಿಬಿ ಎಂಪಿಯ ಶಂಕರ ಮಠ ವಾರ್ಡ್‌ನ ಸದಸ್ಯ ಎಂ.ಶಿವ ರಾಜು ಅವರಿಗೆ ಕೋವಿಡ್‌ ದೃಢಪಟ್ಟಿದೆ.

ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಅವರು ನೆರವಾಗಿದ್ದರು. ಪಿಪಿಇ ಕಿಟ್‌ ಧರಿಸಿ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರಲ್ಲಿ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದರು.

ಶಿವರಾಜು ಅವರ ತಂದೆಗೆ ಇತ್ತೀಚೆಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದಾಗ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಹಾಗಾಗಿ ಕುಟುಂಬದ ಸದಸ್ಯರೆಲ್ಲರೂ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ವೇಳೆ ಶಿವರಾಜು ಅವರಿಗೆ ಸೋಂಕು ದೃಢಪಟ್ಟಿದೆ. ಕುಟುಂಬದ ಉಳಿದ ಸದಸ್ಯರಿಗೆ ಸೋಂಕು ತಗುಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.