ADVERTISEMENT

ಓದು ನಿಲ್ಲಿಸಲು ಮುಂದಾಗಿದ್ದ ವಿದ್ಯಾರ್ಥಿನಿಗೆ ಶೇ 93 ಅಂಕ

ಮನೋಹರ್ ಎಂ.
Published 17 ಜುಲೈ 2020, 21:01 IST
Last Updated 17 ಜುಲೈ 2020, 21:01 IST
ಜಯಸುಧಾ
ಜಯಸುಧಾ   

ಬೆಂಗಳೂರು: ‘ಇಷ್ಟ ಪಟ್ಟು ಆರಿಸಿಕೊಂಡ ವಿಜ್ಞಾನ ವಿಭಾಗದಲ್ಲಿ ಓದು ಕಷ್ಟವಾಯಿತು. ಅರ್ಧದಲ್ಲೇ ಓದು ನಿಲ್ಲಿಸಲು ನಿರ್ಧರಿಸಿದ್ದೆ. ಆದರೆ, ಇಂದು ವಾಣಿಜ್ಯ ವಿಭಾಗದಲ್ಲಿ ಶೇ 93ರಷ್ಟು ಅಂಕ ಗಳಿಸಿದ್ದೇನೆ. ಮುಂದೆ ಲೆಕ್ಕಪರಿ ಶೋಧಕಿ (ಸಿ.ಎ) ಆಗುವ ಕನಸಿದೆ’

ಓದು ಮೊಟಕಿಗೆ ಮುಂದಾಗಿದ್ದ ಜಯಸುಧಾ ಅವರ ಮಾತುಗಳಿವು.

ಅವರದು ತಮಿಳುನಾಡಿನ ಅರುಣಾಚಲಂನ ಕುಟುಂಬ. ಮರಗೆಲಸ ಮಾಡುತ್ತಿದ್ದ ತಂದೆ ಆರೋಗ್ಯ ಸಮಸ್ಯೆಯಿಂದ ಮನೆಯಲ್ಲೇ ಇದ್ದಾರೆ. ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಡತನದಿಂದಾಗಿ ಇವರ ಅಕ್ಕನ ಓದು ಅರ್ಧಕ್ಕೆ ನಿಂತಿದೆ.

ADVERTISEMENT

‘ಎಸ್ಸೆಸ್ಸೆಲ್ಸಿಯಲ್ಲಿ ಶೇ 86 ಅಂಕ ಪಡೆದಿದ್ದೆ. ಚೆನ್ನಾಗಿ ಓದಬೇಕೆಂಬ ಆಸೆಯಿಂದ ಎನ್.ಆರ್.ಕಾಲೊನಿಯ ಆಚಾರ್ಯ ಪಾಠಶಾಲಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿದೆ. ಕೆಲವೇ ತಿಂಗಳಲ್ಲಿ ಕೋರ್ಸ್ ಕಷ್ಟ ಎನಿಸಿ, ಓದು ನಿಲ್ಲಿಸಿ, ತಮಿಳುನಾಡಿಗೆ ಮರಳಲು ನಿರ್ಧರಿಸಿದೆ. ಈ ವೇಳೆ ಕಾಲೇಜಿನ ಪ್ರಾಂಶುಪಾಲರು ಟಿ.ಸಿ ನೀಡಲು ನಿರಾಕರಿಸಿದರು’ ಎಂದರು.

‘10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದಿದ್ದರಿಂದ ಕಾಲೇಜಿನಲ್ಲೇ ಓದು ಮುಂದುವರಿಸುವಂತೆ ಸೂಚಿಸಿ, ವಾಣಿಜ್ಯ ವಿಭಾಗಕ್ಕೆ ವರ್ಗಾಯಿಸಿದರು. ಶೈಕ್ಷಣಿಕ ವೆಚ್ಚ ಭರಿಸಲು ನಮ್ಮಿಂದ ಆಗಲಿಲ್ಲ. ಇದನ್ನು ಮನಗಂಡ ಆಡಳಿತ ಮಂಡಳಿ ಶುಲ್ಕ ಕಡಿಮೆ ಮಾಡಿತು. ವಿಷ್ಣು ಭರತ್ ಎಂಬುವರು ಹಣಕಾಸಿನ ನೆರವು ನೀಡಿದರು. ಪ್ರಾಂಶುಪಾಲ ಅನಿಲ್ ಕುಮಾರ್, ಕಿರಣ್ ಅವರು ಎರಡನೇ ವರ್ಷದ ವೆಚ್ಚ ಭರಿಸಿದರು’ ಎಂದರು.

‘ಜಯಸುಧಾ ಪ್ರತಿಭಾನ್ವಿತೆ. ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ’ ಎಂದು ಪ್ರಾಂಶುಪಾಲ ಎಸ್.ಅನಿಲ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.