ADVERTISEMENT

ಕನ್ನಲ್ಲಿ: ಸ್ವಂತ ಹಣದಲ್ಲಿ ಕೆರೆ ಅಭಿವೃದ್ಧಿ ಯತ್ನ

ಚಿಕ್ಕ ರಾಮು
Published 13 ಜುಲೈ 2019, 19:53 IST
Last Updated 13 ಜುಲೈ 2019, 19:53 IST
ಕೆರೆಯ ಅಲ್ಲಲ್ಲಿ ಹೊಂಡಗಳನ್ನು ತೆಗೆದು ನೀರು ನಿಲ್ಲುವಂತೆ ಮಾಡಿರುವುದು      ಕೆರೆಗೆ ಇಳಿಜಾರು ಮೆಟ್ಟಿಲುಗಳ ನಿರ್ಮಾಣ
ಕೆರೆಯ ಅಲ್ಲಲ್ಲಿ ಹೊಂಡಗಳನ್ನು ತೆಗೆದು ನೀರು ನಿಲ್ಲುವಂತೆ ಮಾಡಿರುವುದು      ಕೆರೆಗೆ ಇಳಿಜಾರು ಮೆಟ್ಟಿಲುಗಳ ನಿರ್ಮಾಣ   

ರಾಜರಾಜೇಶ್ವರಿನಗರ: ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕನ್ನಲ್ಲಿ ಕೆರೆಯನ್ನು ವೀರಭದ್ರಸ್ವಾಮಿ ನಿತ್ಯಾನ್ನ ದಾಸೋಹ ಸಮಿತಿಯ ಅಧ್ಯಕ್ಷ ಎಸ್.ಶಾಂತರಾಜು ಸ್ವಂತ ದುಡ್ಡಿನಲ್ಲಿ ಅಭಿವೃದ್ಧಿಪಡಿಸುವ ಯತ್ನ ಮಾಡಿದ್ದಾರೆ.

65 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಕೆರೆಗೆ ರಾಸಾಯನಿಕ ನೀರು ಸೇರಿ ಕೆಲವು ತಿಂಗಳುಗಳ ಹಿಂದೆ ಜಲಚರಗಳು ಮೃತಪಟ್ಟಿವೆ. ಅದನ್ನು ಕುಡಿದು ಪಕ್ಷಿಗಳು ಸತ್ತಿದ್ದವು. ಪಕ್ಷಿಗಳು ಸತ್ತು ಬಿದ್ದಿರುವುದನ್ನು ಶಾಂತರಾಜು ಕಂಡು ಮಮ್ಮಲ ಮರುಗಿದ್ದರು. ತಕ್ಷಣವೇ ಸ್ವಂತ ₹5 ಲಕ್ಷ ಬಳಸಿ ಹೂಳನ್ನು ತೆಗೆಯಿಸಿ, ಪ್ರಾಣಿ ಪಕ್ಷಿಗಳು ನೀರು ಕುಡಿಯುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಶುದ್ಧ ನೀರು ಶೇಖರಣೆಗೊಂಡಿತು. ಬಳಿಕ ಜಲಮೂಲಕಕ್ಕೆ ಇಳಿಯಲು ಅನುಕೂಲವಾಗಲೆಂದು ಇಳಿಜಾರು ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ.

ಜಲಮೂಲದ ದಂಡೆಯ ಮೇಲೆ ವೀರಭದರಸ್ವಾಮಿಯ ದೇವಸ್ಥಾನವಿದ್ದು ಸುತ್ತಲು ತಡೆಗೋಡೆ ನಿರ್ಮಿಸುತ್ತಿದ್ದಾರೆ. ಕೆರೆಗೆ ಗ್ರಾಮದ ಕೊಳಚೆ ನೀರು ಹರಿಯದಂತೆ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದಾರೆ.

ADVERTISEMENT

ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೂ ಮೊದಲು ಮಳೆ ನೀರು ನೇರವಾಗಿ ಕೆರೆಗೆ ಹರಿದು ಬರುತ್ತಿತ್ತು. ಬಡಾವಣೆ ನಿರ್ಮಾಣದ ವೇಳೆ ರಾಜಕಾಲುವೆಯನ್ನು ಮುಚ್ಚಲಾಯಿತು. ಇದರಿಂದಾಗಿ, ಕೆರೆಗೆ ಮಳೆ ನೀರು ಸೇರುವುದು ನಿಂತಿತು. ಕೆರೆಯ ಆವರಣದಲ್ಲೆಲ್ಲಾ ಜೊಂಡು ತುಂಬಿಕೊಂಡು, ಗಿಡಗಂಟಿಗಳು ಬೆಳೆದಿವೆ. ಇದೇ ‍‍ಪರಿಸ್ಥಿತಿ ಮುಂದುವರಿದರೆ ಕೆರೆ ಕೆಲವೇ ವರ್ಷಗಳಲ್ಲಿ ಸಂಪೂರ್ಣ ನಾಶವಾಗಲಿದೆ ಎಂದು ಶಾಂತರಾಜು ಎಚ್ಚರಿಸಿದರು.

‘ಕೆರೆಗೆ ಮಧ್ಯಭಾಗದಲ್ಲಿ ದ್ವೀಪದ ಮಾದರಿಯನ್ನು ನಿರ್ಮಿಸಿ ಗಿಡ ಮರಗಳನ್ನು ಬೆಳೆಸಿದರೆ ಪ್ರವಾಸಿಗರನ್ನೂ ಅಕರ್ಷಿಸಬಹುದು. ಇದಕ್ಕೆಲ್ಲ ಅಧಿಕಾರಿಗಳು ಅನುಮತಿ ನೀಡಬೇಕು ಮತ್ತು ಸಹಾಯಹಸ್ತ ನೀಡುವವರು ತುರ್ತಾಗಿ ಮುಂದೆ ಬರಬೇಕು’ ಎಂದು ಮನವಿ ಮಾಡಿದರು.

ಸ್ವಂತ ಖರ್ಚಿನಿಂದ ಕೆರೆಗೆ ಇಳಿಜಾರು ಮೆಟ್ಟಿಲುಗಳ ನಿರ್ಮಾಣ ಮಾಡಿಸುತ್ತಿರುವ ಎಸ್.ಶಾಂತರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.