ADVERTISEMENT

ಶಾಲಾ ದಿನಗಳ ಮೆಲುಕು ಹಾಕಿದ ರಾಹುಲ್‌ ದ್ರಾವಿಡ್‌

ಸೇಂಟ್‌ ಜೋಸೆಫ್ಸ್‌ ಶಾಲೆಯಲ್ಲಿನ ನೆನಪುಗಳನ್ನು ಬಿಚ್ಚಿಟ್ಟ ಕ್ರಿಕೆಟಿಗ ‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 20:29 IST
Last Updated 31 ಆಗಸ್ಟ್ 2018, 20:29 IST
ನಗರದಲ್ಲಿ ಶುಕ್ರವಾರ ಸೇಂಟ್‌ ಜೋಸೆಫ್ಸ್‌ ಬಾಲಕರ ಶಾಲೆಯಲ್ಲಿ ಆಯೋಜಿಸಿದ್ದ ಹಳೆ ವಿದ್ಯಾರ್ಥಿಗಳ ಸಂಘದ ನೂರನೇ ವರ್ಷದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ‘ಎ ಹಂಡ್ರೆಡ್‌ ಇಯರ್ಸ್‌, ಎ ಮಿಲಿಯನ್ ಮೆಮೋರಿಸ್‌’ ಪುಸ್ತಕ ಬಿಡುಗಡೆ ಮಾಡಿದರು. ಹಳೆಯ ವಿದ್ಯಾರ್ಥಿ ಗ್ರೆಗೊರಿ ಡಿ ನಜರತ್‌ ಇದ್ದಾರೆ      –ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರ ಸೇಂಟ್‌ ಜೋಸೆಫ್ಸ್‌ ಬಾಲಕರ ಶಾಲೆಯಲ್ಲಿ ಆಯೋಜಿಸಿದ್ದ ಹಳೆ ವಿದ್ಯಾರ್ಥಿಗಳ ಸಂಘದ ನೂರನೇ ವರ್ಷದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ‘ಎ ಹಂಡ್ರೆಡ್‌ ಇಯರ್ಸ್‌, ಎ ಮಿಲಿಯನ್ ಮೆಮೋರಿಸ್‌’ ಪುಸ್ತಕ ಬಿಡುಗಡೆ ಮಾಡಿದರು. ಹಳೆಯ ವಿದ್ಯಾರ್ಥಿ ಗ್ರೆಗೊರಿ ಡಿ ನಜರತ್‌ ಇದ್ದಾರೆ      –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಾಲೆಯ ಎದುರು ಹಾದು ಹೋಗುವಾಗ ನನ್ನ ಹೃದಯ ಬಡಿತ ಹೆಚ್ಚುತ್ತದೆ. ಇಲ್ಲಿ ನನ್ನ ಬಾಲ್ಯದ ನೆನಪುಗಳು ಇವೆ. ಮರೆಯಲಾರದ ಕ್ಷಣಗಳಿವೆ’ ಎಂದು ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಹೇಳಿದರು.

ಸೇಂಟ್‌ ಜೋಸೆಫ್ಸ್‌ ಬಾಲಕರ ಶಾಲೆ ‘ಹಳೆ ವಿದ್ಯಾರ್ಥಿಗಳ ಸಂಘ’ದ ನೂರನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ‘ಎ ಹಂಡ್ರೆಡ್‌ ಇಯರ್ಸ್‌, ಎ ಮಿಲಿಯನ್‌ ಮೆಮೋರಿಸ್‌’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಶಿಕ್ಷಕರು ನಮ್ಮ ತಪ್ಪುಗಳನ್ನು ತಿದ್ದಿದರು, ತಾಳ್ಮೆಯನ್ನು ಕಲಿಸಿದರು. ಇದು ನನ್ನ ವೃತ್ತಿಜೀವನದ ಯಶಸ್ಸಿಗೆ ಕಾರಣವಾಯಿತು. ಈ ಶಾಲೆಯ ಅಂಗಳದಲ್ಲಿ ನಾನು ಕ್ರಿಕೆಟ್‌ ಅಭ್ಯಾಸ ಮಾಡಿದ್ದೇನೆ. ಈಗಲೂ ಬೇರೆ ದೇಶಗಳಲ್ಲಿ ನನ್ನನ್ನು ಸೇಂಟ್‌ ಜೋಸೆಫ್ಸ್‌ ಶಾಲೆಯ ವಿದ್ಯಾರ್ಥಿ ಎಂದು ಗುರುತಿಸಿದಾಗ ಖುಷಿಯಾಗುತ್ತದೆ’ ಎಂದರು.

ADVERTISEMENT

‘ನನ್ನ ಜೊತೆ ಓದಿದ ಸ್ನೇಹಿತರ ನೆನಪುಗಳು ಇನ್ನೂ ಹಸಿರಾಗಿವೆ. ಅವರು ಸಿಕ್ಕಾಗ ಈ ಶಾಲೆಯಲ್ಲಿ ಕಳೆದ ನೆನಪುಗಳು ಮರುಕಳಿಸುತ್ತವೆ’ ಎಂದು ತಮ್ಮ ಓದಿನ ದಿನಗಳನ್ನು ಅವರು ನೆನಪಿಸಿಕೊಂಡರು.

1989ರಲ್ಲಿ ಇದೇ ಶಾಲೆಯಲ್ಲಿ ಓದುತ್ತಿದ್ದ ರಾಹುಲ್‌ ಅವರ ನೆನಪುಗಳನ್ನು ಗ್ರೆಗರಿ ಡಿ ನಜರತ್‌ ನೆನೆಪಿಸಿಕೊಂಡರು.

‘ನಮ್ಮ ಶಾಲೆಯಲ್ಲಿ ಓದಿದ ರಾಹುಲ್‌, ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದು ನಮ್ಮ ಹೆಮ್ಮೆ’ ಎಂದು ಅವರು ಅನಿಸಿಕೆ ಹಂಚಿಕೊಂಡರು.

ಭಾರತೀಯ ಅಂಚೆ ಇಲಾಖೆಯಿಂದ ಈ ಸಂದರ್ಭದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.

ಬಿಗಿದಪ್ಪಿಕೊಂಡ ‘ಓಲ್ಡ್‌ ಬಾಯ್ಸ್‌’

ನಾವೆಲ್ಲಾ ಇಲ್ಲಿಗೆ ‘ಓಲ್ಡ್‌ ಬಾಯ್ಸ್‌’ ಎಂದು ಬಿಗಿದಪ್ಪಿ ಸಂಭ್ರಮಿಸಿದ ಹಳೆಯ ವಿದ್ಯಾರ್ಥಿಗಳ ಮಾತುಗಳು, 1970ರ ದಶಕವನ್ನು ನೆನಪಿಸುವಂತಿತ್ತು.

‘ಈ ಶಾಲೆಯ ಅಂಗಳದಲ್ಲಿ ನಾವು ಆಡಿದ ನೆನಪುಗಳನ್ನು ಮರೆಯಲು ಸಾಧ್ಯವೇ’ ಎಂದು ಕೆನಡಾದಲ್ಲಿ ನೆಲೆಸಿದ್ದ ವಿದ್ಯಾರ್ಥಿಯೊಬ್ಬರು ಹೇಳಿದ್ದಕ್ಕೆ, ಪಕ್ಕದಲ್ಲಿಯೇ ಕೂತಿದ್ದ ಎಂಬತ್ತರ ಹರೆಯದ ವ್ಯಕ್ತಿ ‘ಹೌದೌದು’ ಎಂದು ತಲೆಯಾಡಿಸಿದರು.

100 ವರ್ಷದ ಹಳೆಯ ವಿದ್ಯಾರ್ಥಿ ಸಂಘಕ್ಕೆ ಬಹುಶಃ ನಾನೇ ಹಿರಿಯ ಎಂದು ಹೇಳಿದ ಅಮೆರಿಕದ ವಾಸಿಯೊಬ್ಬರು ಎಲ್ಲರ ಗಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.