ADVERTISEMENT

ರೈಲ್ವೆ: ಸ್ವಾಧೀನವಾಗದ 3,357 ಹೆಕ್ಟೇರ್‌ ಜಮೀನು

ಪ್ರಮುಖ ರೈಲು ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿ

ಬಾಲಕೃಷ್ಣ ಪಿ.ಎಚ್‌
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
ರೈಲು ಹಳಿ (ಸಾಂದರ್ಭಿಕ ಚಿತ್ರ)
ರೈಲು ಹಳಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ 3,357 ಹೆಕ್ಟೇರ್ ಜಮೀನು ಇನ್ನೂ ಸ್ವಾಧೀನಗೊಂಡಿಲ್ಲ. ಇದರಿಂದಾಗಿ ಪ್ರಮುಖ ರೈಲು ಯೋಜನೆಗಳು ಅನುಷ್ಠಾನಗೊಳ್ಳಲು ಅಡ್ಡಿ ಉಂಟಾಗಿದೆ.

96 ಕಿ.ಮೀ ಉದ್ದದ ಶಿವಮೊಗ್ಗ–ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ 559 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಅದರಲ್ಲಿ 333 ಹೆಕ್ಟೇರ್ ಸ್ವಾಧೀನವಾಗಿಲ್ಲ. ಬೆಳಗಾವಿ–ಧಾರವಾಡ 73 ಕಿ.ಮೀ. ಹೊಸ ಮಾರ್ಗಕ್ಕೆ 581 ಹೆಕ್ಟೇರ್, ಶಿವಮೊಗ್ಗ–ಹರಿಹರ 79 ಕಿ.ಮೀ. ಉದ್ದದ ಹೊಸ ಮಾರ್ಗಕ್ಕೆ 488 ಹೆಕ್ಟೇರ್, ವೈಟ್‌ಫೀಲ್ಡ್–ಕೋಲಾರ 53 ಕಿ.ಮೀ ಉದ್ದದ ಹೊಸ ಮಾರ್ಗಕ್ಕೆ 337 ಹೆಕ್ಟೇರ್ ಮತ್ತು ಹಾಸನ–ಬೇಲೂರು 32 ಕಿ.ಮೀ. ಉದ್ದದ ಹೊಸ ಮಾರ್ಗಕ್ಕೆ 206 ಹೆಕ್ಟೇರ್ ಜಮೀನು ಅಗತ್ಯವಿದೆ. ಈ ಯೋಜನೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

‘ರಾಜ್ಯವು ರೈಲ್ವೆ ಮೂಲಸೌಕರ್ಯ ವಿಸ್ತರಣೆಯಲ್ಲಿ ಮಹತ್ವದ ಘಟ್ಟವನ್ನು ತಲುಪಿದೆ. ಹಲವು ಪರಿವರ್ತನಾತ್ಮಕ ರೈಲು ಯೋಜನೆಗಳು ಪ್ರಗತಿಯಲ್ಲಿವೆ. ಹಣಕಾಸು ಹಂಚಿಕೆ ಮತ್ತು ಆಡಳಿತಾತ್ಮಕ ಅನುಮೋದನೆಗಳು ಈಗಾಗಲೇ ಲಭಿಸಿವೆ. ಆದರೆ ಈ ಯೋಜನೆಗಳ ಅನುಷ್ಠಾನದ ವೇಗವು ಕುಂಠಿತವಾಗಿದೆ. ಅದಕ್ಕೆ ಸಕಾಲಿಕವಾಗಿ ಭೂಸ್ವಾಧೀನದಗದೇ ಇರುವುದೇ ಕಾರಣವಾಗಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ನೈಋತ್ಯ ರೈಲ್ವೆ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದ್ದರೂ ಕೆಲವು ಯೋಜನೆಗಳಲ್ಲಿ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಪ್ರಗತಿ ನಿಧಾನಗೊಂಡಿದೆ. ಜೊತೆಗೆ, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನವನ್ನು ಕೂಡ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಯೋಜನೆಗಳು ರೈಲು ಮಾರ್ಗಗಳ ವಿಸ್ತರಣೆ ಮಾತ್ರವಲ್ಲ, ಅವು ಪ್ರಾದೇಶಿಕ ಅಭಿವೃದ್ಧಿಯ ನೆಲೆಗಟ್ಟಾಗಿವೆ. ಉತ್ತಮ ರೈಲು ಸಂಪರ್ಕವು ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ. ಜತೆಗೆ ಸರಕು ಸಾಗಣೆಯ ವೆಚ್ಚವೂ ಕಡಿಮೆ ಇರುವುದರಿಂದ ವ್ಯಾಪಾರ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಕೃಷಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಹೊಸ ಮಾರುಕಟ್ಟೆಗಳ ಪ್ರವೇಶವನ್ನು ಸುಲಭಗೊಳಿಸುತ್ತದೆ. ಉದ್ಯೋಗಾವಕಾಶಗಳ ಹೆಚ್ಚಳಕ್ಕೂ ಸಹಕಾರಿಯಾಗುತ್ತದೆ. ರೈಲ್ವೆ ಯೋಜನೆಗಳು ಪೂರ್ಣಗೊಂಡರೆ ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗುತ್ತದೆ. ಆರ್ಥಿಕ ವಿಸ್ತರಣೆ ವೇಗಗೊಳ್ಳುತ್ತದೆ. ಲಕ್ಷಾಂತರ ಜನರ ಸಂಚಾರ ಸುಗಮವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಂಕಿ ಅಂಶ

9064 ಹೆಕ್ಟೇರ್ ರಾಜ್ಯದಲ್ಲಿ ರೈಲ್ವೆ ಯೋಜನೆಗೆ ಮಂಜೂರಾದ ಜಮೀನು 5707 ಹೆಕ್ಟೇರ್ ಇಲ್ಲಿವರೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನು 3357 ಹೆಕ್ಟೇರ್ ಇನ್ನೂ ಸ್ವಾಧೀನವಾಗದ ಜಮೀನು

ಶೇ 95ರಷ್ಟು ಸ್ವಾಧೀನವಾದರಷ್ಟೇ ಟೆಂಡರ್

ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಶೇ 95ರಷ್ಟು ಜಮೀನು ಸ್ವಾಧೀನವಾಗದೇ ಸ್ವಾಧೀನ ಮಾಡಿದ ಜಮೀನನ್ನು ರೈಲ್ವೆಗೆ ಹಸ್ತಾಂತರಿಸದೇ ಟೆಂಡರ್‌ ಕರೆಯಲು ಸಾಧ್ಯವಿಲ್ಲ. ಟೆಂಡರ್‌ ಕರೆಯದೇ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.