ADVERTISEMENT

ಚರಂಡಿಯಲ್ಲಿ ನೀರು ಇಂಗಿಸುವುದೇ ಪರಿಹಾರ

ಚರಂಡಿಗಳಲ್ಲಿ ರಂಧ್ರಯುಕ್ತ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಕೆಗೆ ಸಲಹೆ

ಗುರು ಪಿ.ಎಸ್‌
Published 23 ಜುಲೈ 2021, 19:29 IST
Last Updated 23 ಜುಲೈ 2021, 19:29 IST
   

ಬೆಂಗಳೂರು: ನಗರದಲ್ಲಿ ಜೋರು ಮಳೆ ಸುರಿಯುವ ವೇಳೆ ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕವೇ ಸೃಷ್ಟಿಯಾಗುತ್ತಿದೆ. ಮಳೆ ರಭಸವಾಗಿ ಬೀಳುತ್ತಿದ್ದಂತೆ ತಗ್ಗು ಪ್ರದೇಶದಲ್ಲಿನ ಬಡಾವಣೆಗಳಲ್ಲಿ ವಾಸವಿರುವವರು ಚಿಂತೆಗೀಡಾಗುತ್ತಿದ್ದಾರೆ. ಕೆರೆ–ಕಟ್ಟೆ, ರಾಜಕಾಲುವೆಗಳ ಒತ್ತುವರಿ, ಹೂಳನ್ನು ಸಕಾಲದಲ್ಲಿ ತೆಗೆಯದೇ ಇರುವುದು ಸಮಸ್ಯೆಗೆ ಕಾರಣವಾಗುತ್ತಿದೆ.

ಇದಲ್ಲದೆ, ಅವೈಜ್ಞಾನಿಕ ನಗರೀಕರಣದಿಂದಲೂ ಜನ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಅಂದರೆ, ಕಾಂಕ್ರೀಟ್ ಮತ್ತು ಡಾಂಬರಿನ ರಸ್ತೆಗಳ ಮೇಲೆ ಬಿದ್ದ ಮಳೆ ನೀರು ಭೂಮಿಯೊಳಗೆ ಇಂಗುತ್ತಿಲ್ಲ. ಚರಂಡಿಗಳನ್ನು ಕೂಡ ಕಾಂಕ್ರೀಟ್‌ನಿಂದಲೇ ನಿರ್ಮಿಸಲು ಆರಂಭಿಸಿದ ಮೇಲಂತೂ ನೀರು ಇಂಗಲು ವ್ಯವಸ್ಥೆಯೇ ಇಲ್ಲದಂತಾಗಿದೆ. ಚರಂಡಿಯಲ್ಲಿ ಬೀಳುವ ನೀರು ಕೂಡ ಅಲ್ಲಿಯೇ ಇಂಗುವಂತೆ ಮಾಡುವುದೇ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ ನಗರದ ಗೋಪಾಲನ್ ಎಂಜಿನಿಯರಿಂಗ್‌ ಮತ್ತು ನಿರ್ವಹಣಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್.ಸಿ. ಶ್ರೇಯಸ್.

‘ರಂಧ್ರಯುಕ್ತ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ತಯಾರಿಸಿ ಅವುಗಳನ್ನು ರಸ್ತೆ ಬದಿಯ ಚರಂಡಿಗಳ ತಳಕ್ಕೆ ಅಲ್ಲಲ್ಲಿ ಅಳವಡಿಸುವುದರಿಂದ ಬಿದ್ದ ಮಳೆ ನೀರು ಚರಂಡಿಯನ್ನು ಸೇರಿ, ಸ್ಲ್ಯಾಬ್‌ನಲ್ಲಿನ ರಂಧ್ರಗಳ ಮೂಲಕ ಕೆಳಗಿಳಿದು ಭೂಮಿಯೊಳಗೆ ಇಂಗುತ್ತದೆ. ನಮ್ಮ ಕಾಲೇಜಿನ ಪ್ರಯೋಗಾಲಯದಲ್ಲಿ ಇದನ್ನು ಪ್ರಯೋಗಿಸಿದ್ದು, ಯಶಸ್ವಿಯಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ರಂಧ್ರಯುಕ್ತ ಕಾಂಕ್ರೀಟ್‌ ಸಾಂಪ್ರದಾಯಿಕ ಕಾಂಕ್ರೀಟ್‌ಗಿಂತ ವಿಭಿನ್ನ. ಇದರ ತಯಾರಿಕೆಯಲ್ಲಿ ಮರಳನ್ನು ಉಪಯೋಗಿಸುವುದಿಲ್ಲ. ರಂಧ್ರಗಳ ಮೂಲಕವೇ ನೀರು ಕೆಳಗಿಳಿಯುತ್ತದೆ. ನಾಲ್ಕು ಇಂಚಿನಷ್ಟು ದಪ್ಪದ ಒಂದು ಚದರ ಅಡಿಯ ಸ್ಲ್ಯಾಬ್‌ಗಳನ್ನು ತಯಾರಿಸಿ ರಸ್ತೆಬದಿಯ ಚರಂಡಿಗಳಲ್ಲಿ ಅಲ್ಲಲ್ಲಿ ಹಾಸುಗಳಾಗಿ ಹಾಗೂ ಪ್ರವಾಹ ಪೀಡಿತ ಆಯಕಟ್ಟಿನ ಜಾಗಗಳಲ್ಲಿ ಅಳವಡಿಸಬಹುದು’ ಎಂದರು.

‘ಒಂದು ಸ್ಲ್ಯಾಬ್‌ ತಯಾರಿಸಲು ಹೆಚ್ಚೆಂದರೆ ₹30ರಿಂದ ₹35 ವೆಚ್ಚವಾಗುತ್ತದೆ. ಈಗಾಗಲೇ ನಿರ್ಮಾಣವಾಗಿರುವ ಚರಂಡಿಗಳಲ್ಲಿ ಈ ವ್ಯವಸ್ಥೆಯ ಅಳವಡಿಕೆ ಕಷ್ಟವಾಗಬಹುದು. ಆದರೆ, ಭವಿಷ್ಯದಲ್ಲಿ ನಿರ್ಮಾಣವಾಗುವ ಚರಂಡಿಗಳಲ್ಲದೆ, ಪಾದಚಾರಿ ಮಾರ್ಗಗಳು, ತೋಟ, ಉದ್ಯಾನಗಳು, ಆಟದ ಮೈದಾನಗಳಲ್ಲಿಯೂ ಇಂತಹ ರಂಧ್ರಯುಕ್ತ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸಬಹುದು. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ತಂತ್ರಜ್ಞಾನವನ್ನು ಅಳವಡಿಸಿದರೆ ನಗರ ಮತ್ತು ವಸತಿ ಪ್ರದೇಶಗಳಲ್ಲಿನ ಮಳೆ ನೀರಿನ ಪ್ರವಾಹವನ್ನು ಶಾಶ್ವತವಾಗಿ ತಡೆಯಬಹುದಾಗಿದೆ’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.