
ಬೆಂಗಳೂರು: ‘ಸಾಹಿತ್ಯದಲ್ಲಿ ವಿಮರ್ಶೆಗೆ ಜಾಗ ಕಡಿಮೆಯಾಗುತ್ತಿದೆ. ಸಮಾಜದಲ್ಲಿಯೇ ವಿಮರ್ಶಾತ್ಮಕ ಚಿಂತನೆಗೆ ಅವಕಾಶಗಳು ಕಡಿಮೆಯಾಗುತ್ತಿರುವುದರ ಪರಿಣಾಮ ಸಾಹಿತ್ಯದಲ್ಲಿಯೂ ಉಂಟಾಗಿರಬೇಕು’ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದರು.
ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ವತಿಯಿಂದ ಶುಕ್ರವಾರ ‘ಕಾವ್ಯಾನಂದ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಿಕೆಗಳಲ್ಲಿಯೂ ವಿಮರ್ಶೆಗೆ ಜಾಗ ಇಲ್ಲದಂತಾಗಿದೆ. ಜಾಗ ನೀಡುತ್ತಿರುವ ಪತ್ರಿಕೆಗಳಲ್ಲಿಯೂ ಶಬ್ದಗಳ ಮಿತಿ ಇರುತ್ತದೆ. ವಿಮರ್ಶೆ ಮಾತ್ರವಲ್ಲ, ಗಂಭೀರ ಸಾಹಿತ್ಯವೂ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ಸಿದ್ದಯ್ಯ ಪುರಾಣಿಕರು ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕದವರು. ಅವರ ಬರಹಗಳು ಭಾವೈಕ್ಯವನ್ನು ಸಾರಿದ್ದವು. ಏನಾದರೂ ಆಗು ಮೊದಲು ಮಾನವನಾಗು ಎಂದು ಮಾನವೀಯತೆಗೆ ಆದ್ಯತೆ ನೀಡಿದ್ದರು. ಅವರು ಕಾವ್ಯಾನಂದ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಅವರ ಹೆಸರಲ್ಲಿ ಈ ಪುರಸ್ಕಾರ ನೀಡಲಾಗುತ್ತಿದೆ’ ಎಂದು ತಿಳಿಸಿದರು.
‘ಸಿದ್ದಯ್ಯ ಅವರು ಕನ್ನಡದಲ್ಲಿ ಮಾತ್ರವಲ್ಲ ಉರ್ದು ಸಾಹಿತ್ಯದಲ್ಲಿಯೂ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ತಂದೆ ದ್ಯಾಮಾಪುರದ ಚನ್ನಕವಿ ಕೂಡ ವಿದ್ವಾಂಸರಾಗಿದ್ದರು. ಪುರಾಣಿಕರು ಉತ್ತಮ ಆಡಳಿತಗಾರರೂ ಆಗಿದ್ದರು. ಕಾರ್ಮಿಕ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ಕಾರ್ಮಿಕರ ಪ್ರೀತಿಗೆ ಪಾತ್ರರಾಗಿದ್ದರು’ ಎಂದು ವಿವರಿಸಿದರು.
ಸಹಾಯಕ ಪ್ರಾಧ್ಯಾಪಕ ರಂಗನಾಥ ಕಂಟನಕುಂಟೆ ಅವರು ‘ಸಾಂಸ್ಕೃತಿಕ ರಾಜಕೀಯ–ಇಂದಿನ ಇತಿಹಾಸ’ ಕೃತಿ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ಅಧ್ಯಕ್ಷೆ ವಿಜಯಾ ನಂದೀಶ್ವರ, ಮ್ಯಾನೇಜಿಂಗ್ ಟ್ರಸ್ಟಿ ಪ್ರಸನ್ನ ಕುಮಾರ ಪುರಾಣಿಕ, ಕಾರ್ಯದರ್ಶಿ ರುದ್ರೇಶ್ ಅದರಂಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.