
ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ಚಲನಚಿತ್ರ ನಿರ್ದೇಶಕರಾಗಿ 50 ವರ್ಷ ತುಂಬಿದ ಸಂಭ್ರಮದಲ್ಲಿ ತಾರೆಯರು, ಕಲಾವಿದರ ಸಮ್ಮುಖದಲ್ಲಿ ‘ನಿರ್ದೇಶಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಐದು ದಿನಗಳ ಎಸ್‌ವಿಆರ್ 50 ಸಾಧನೆ, ಸಂಭ್ರಮ, ಚಿತ್ರೋತ್ಸವದ ಸಮಾರೋಪ ಸಮಾರಂಭ ರವೀಂದ್ರ ಕಲಾಕ್ಷೇತ್ರದಲ್ಲಿ ಆತ್ಮೀಯ ಕ್ಷಣಗಳಿಗೆ ಸಾಕ್ಷಿಯಾಯಿತು.
ಚಿತ್ರರಂಗದಲ್ಲಿ ಬೆಳೆಯಲು ಬಾಬು ಅವರು ಪ್ರೋತ್ಸಾಹಿಸಿದ ಕ್ಷಣಗಳನ್ನು ನಟಿ ಸುಹಾಸಿನಿ, ಅರ್ಜುನ್ ಸರ್ಜಾ, ರವಿಚಂದ್ರನ್, ಹಂಸಲೇಖ ಸಹಿತ ಹಲವರು ನೆನಪಿಸಿಕೊಂಡರು.
ಸಂಗೀತ ನಿರ್ದೇಶಕ ಹಂಸಲೇಖ ಅವರಂತೂ ಚಿನ್ನದ ಪದಕ, ವಿಶೇಷ ದೇಸಿ ಶೈಲಿಯ ಸನ್ಮಾನದ ಮೂಲಕ ‘ಮುತ್ತಿನ ಹಾರ’ದ ಆ ದಿನಗಳ ಒಡನಾಟಕ್ಕೆ ಪ್ರೀತಿಯನ್ನು ಅರ್ಪಿಸಿದರು. ಹಂಸಲೇಖ ತಂಡದವರು ನಡೆಸಿಕೊಟ್ಟ ಸಂಗೀತ ಲಹರಿ ಕಾರ್ಯಕ್ರಮ ಬಾಬು ಅವರ ಚಿತ್ರಗಳಲ್ಲಿನ ಸುಮಧುರ ಹಾಡುಗಳ ಯಾನದಂತೆಯೇ ಇತ್ತು.
‘ಬಾಬು ಇಲ್ಲದಿದ್ದರೆ ಜೀರೋ’:
ಸನ್ಮಾನಿಸಿ ಮಾತನಾಡಿದ ನಟಿ ಸುಹಾಸಿನಿ, ‘ನನ್ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಈ ಮಟ್ಟಕ್ಕೆ ಜನರ ಪ್ರೀತಿ ಗಳಿಸಲು ಕಾರಣರಾದವರೇ ಬಾಬು. ನನಗೆ ಅವರು ಅವಕಾಶ ಕೊಡದೇ ಇದ್ದರೆ ಸುಹಾಸಿನಿ ಜೀರೋ ಆಗಿರುತ್ತಿದ್ದರು. ಅವರನ್ನು ಸದಾ ನೆನಪಿಸಿಕೊಳ್ಳಬೇಕು. 70–80ರ ದಶಕದಲ್ಲಿಯೇ ದೊಡ್ಡ ಬಜೆಟ್‌ನ ಚಿತ್ರಗಳನ್ನು ಮಾಡಿದ ಸಾಹಸಿಗ ಬಾಬು. ದೊಡ್ಡದಾಗಿ ಯೋಚಿಸುವ ಧೈರ್ಯವಂತ ನಿರ್ದೇಶಕರು’ ಎಂದು ಹೇಳಿದರು.
ನಟ ರವಿಚಂದ್ರನ್ ಮಾತನಾಡಿ, ‘ಎಷ್ಟೇ ಕಷ್ಟ ಬಂದರೂ ಚಿತ್ರರಂಗದಲ್ಲಿ ಸದಾ ಕನಸು ಕಾಣುವ, ವಿಭಿನ್ನ ಸಿನಿಮಾ ಮಾಡುವ ಉತ್ಸಾಹ ತುಂಬಿದವರು ಬಾಬು. ಸಿನಿಮಾ ಗೆದ್ದಾಗ ಮಾತ್ರವಲ್ಲದೇ ಸೋತಾಗಲೂ ನಮ್ಮೊಂದಿಗೆ ಇದ್ದು ಬೆನ್ನೆಲುಬಾಗಿ ನಿಲ್ಲುವ ಆ ಗುಣದಿಂದಲೇ ನಮ್ಮ ಒಡನಾಟ ಈಗಲೂ ಉಳಿದಿದೆ’ ಎಂದು ನೆನಪಿಸಿಕೊಂಡರು.
ನಟ ಅರ್ಜುನ್ ಸರ್ಜಾ ಮಾತನಾಡಿ, ‘ಸಿಂಹದ ಮರಿ ಸೈನ್ಯ ಚಿತ್ರದಲ್ಲಿ ಮೊದಲು ಅಭಿನಯಿಸಲು ಅವಕಾಶ ಕೊಟ್ಟರು. ಅಭಿನಯದ ವೇಳೆ ಅವರಿಂದ ಏಟು ತಿಂದು ಕಲಿತಿದ್ದರಿಂದಲೇ ಈಗ ಈ ಹಂತಕ್ಕೆ ಬೆಳೆದಿದ್ದೇನೆ. ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಅವರು’ ಎಂದು ನುಡಿದರು.
ನಿರ್ದೇಶಕ ಹಂಸಲೇಖ, ‘ಎಸ್‌ವಿಆರ್ ಅವರು ‘ಬಣ್ಣದ ಗೆಜ್ಜೆ’ ಚಿತ್ರಕ್ಕೆ ಹಾಡೊಂದನ್ನು ರಚಿಸಿಕೊಡಲು ಹೇಳಿದ್ದರು. ಅದಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬ ಗೀತೆ ಬರೆದು, ಅದು ಮದ್ರಾಸ್ ಸ್ಟುಡಿಯೋದಲ್ಲಿ ಅದ್ಭುತವಾಗಿ ರೆಕಾರ್ಡಿಂಗ್ ಆದ ಬಗೆಯನ್ನು ಮರೆಯಲು ಸಾಧ್ಯವಿಲ್ಲ. ‘ಮುತ್ತಿನಹಾರ’ ಸೇರಿ ಹಲವು ಸಿನಿಮಾಗಳಿಗೆ ಗೀತೆ ರಚಿಸಲು ಎಸ್‌ವಿಆರ್ ಕಾರಣಕರ್ತರು‘ ಎಂದು ಹೇಳಿದರು.
ನಟ ಧ್ರುವ ಸರ್ಜಾ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್.ಸೀತಾರಾಂ, ಕಂದೀಲು ಚಿತ್ರ ನಿರ್ಮಾಪಕ ಪ್ರಕಾಶ್ ಕಾರ್ಯಪ್ಪ, ಪತ್ರಕರ್ತ ಗಂಗಾಧರ್ ಮೊದಲಿಯಾರ್, ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಹಾಜರಿದ್ದರು.
‘ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ’
‘ಹುಟ್ಟಿದರೆ ಕನ್ನಡ ನಾಡಿನಲ್ಲಿಯೇ ಮತ್ತೆ ಹುಟ್ಟಬೇಕು. ಮುಂದಿನ ಹತ್ತು ಜನುಮದಲ್ಲೂ ಕನ್ನಡ ಚಿತ್ರರಂಗದಲ್ಲಿಯೇ ಕೆಲಸ ಮಾಡುವ ಆಸೆಯಿದೆ’ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನುಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ‘ನಾನು ಹಿಂದಿ ತೆಲುಗು ಸಹಿತ ಹಲವು ಭಾಷೆಗಳಲ್ಲಿ ಕೆಲಸ ಮಾಡಿದ್ದರೂ ಕನ್ನಡ ಚಿತ್ರರಂಗದ ಕಾಯಕವೇ ಖುಷಿ ಕೊಟ್ಟಿದೆ. ನಮ್ಮ ನೆಲ ಮಣ್ಣು ಗಾಳಿ ಎಂದರೆ ನನಗೆ ಸದಾ ಸ್ಫೂರ್ತಿ’ ಎಂದು ಹೇಳಿದರು. ‘ಹೇಮಾಮಾಲಿನಿಯಂತಹ ನಟಿಯರು ಹಿಂದಿಯಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರು. ರಮೇಶ್ ಸಿಪ್ಪಿಯಂತಹವರನ್ನು ಒಪ್ಪಿಸಿದವರು ಅವರು. ವೀರಸ್ವಾಮಿ ಕೆಸಿಎನ್ ಚಂದ್ರಶೇಖರ್ ಸಹಿತ ಹಲವರು ಬೆನ್ನುಲುಬಾಗಿ ನಿಂತರು. ವಿಷ್ಣುವರ್ಧನ್ ಅಂಬರೀಷ್ ಅಂಥವರನ್ನು ಸದಾ ನೆನೆಯುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.