
ಬೆಂಗಳೂರು: ಮುಂದಿನ ಪೀಳಿಗೆಯ ಏರೋ ಎಂಜಿನ್ (ವಿಮಾನದ ಎಂಜಿನ್) ಅಭಿವೃದ್ಧಿಗೆ ವಿಜ್ಞಾನಿಗಳು ಒತ್ತು ನೀಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಡಿಆರ್‌ಡಿಒದ ಗ್ಯಾಸ್ ಟರ್ಬೈನ್ ಸಂಶೋಧನಾ ಸಂಸ್ಥೆಗೆ (ಜಿಟಿಆರ್‌ಇ) ಭೇಟಿ ನೀಡಿ, ದೇಶೀಯ ಮಿಲಿಟರಿ ಅನಿಲ ಟರ್ಬೈನ್ ಎಂಜಿನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಯೋಜನೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಐದನೇ ಪೀಳಿಗೆಯ ಏರೋ ಎಂಜಿನ್‌ನಲ್ಲಿದ್ದೇವೆ. ಇದು ಸಾಕಾಗಲ್ಲ. ಆರನೇ ಪೀಳಿಗೆಗೆ ಬೇಕಾದ ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಸಾಧ್ಯವಾದಷ್ಟು ಬೇಗ ಆರಂಭಿಸಬೇಕು. ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.
‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡ ಇಂತಹ ಎಂಜಿನ್‌ಗಳನ್ನು ತಯಾರಿಸಲು 25 ರಿಂದ 30 ವರ್ಷ ತೆಗೆದುಕೊಳ್ಳುತ್ತವೆ. ಭಾರತವು ಈ ಸಮಯವನ್ನು ಕಡಿಮೆ ಮಾಡಿಕೊಳ್ಳಬೇಕು. ಈಗಾಗಲೇ 20 ವರ್ಷಗಳು ಮುಗಿದಿವೆ. ಇನ್ನು ಆರೇಳು ವರ್ಷಗಳ ಒಳಗೆ ನಾವು ಗುರಿ ತಲುಪಬೇಕು’ ಎಂದು ತಿಳಿಸಿದರು.
ಬದಲಾಗುತ್ತಿರುವ ಭೌಗೋಳಿಕ, ರಾಜಕೀಯ ಪರಿಸ್ಥಿತಿಯಲ್ಲಿ ಏರೋ ಎಂಜಿನ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವುದು ಅಗತ್ಯ. ಈಗಿನ ಸಂದರ್ಭದಲ್ಲಿ ನಿರ್ಣಾಯಕವಾದ ತಂತ್ರಜ್ಞಾನ ಹೊಂದಿರುವ ರಾಷ್ಟ್ರಗಳು ಮಾತ್ರ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರತಿಪಾದಿಸಿದರು.
18 ವರ್ಷಗಳಿಂದ ಬಾಕಿ ಇದ್ದ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಈಗ ಪೂರ್ಣಗೊಂಡಿದೆ. ಬ್ರಿಟನ್ ಜೊತೆಗಿನ ಜಂಟಿ ಅಧ್ಯಯನ ಮತ್ತು ಫ್ರಾನ್ಸ್‌ನೊಂದಿಗೆ ರಾಷ್ಟ್ರೀಯ ಏರೋ ಎಂಜಿನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಮಾತುಕತೆಗಳು ಭಾರತಕ್ಕೆ ಪೂರಕವಾಗಿವೆ. ಈ ಸಹಯೋಗಗಳು ಹೊಸ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿವೆ ಎಂದರು.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್ ಸಿಂಧೂರ್’ದಲ್ಲಿ ಬಳಕೆಯಾದ ಸಂವಹನ ವ್ಯವಸ್ಥೆಯಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗೆ ಎಲ್ಲವೂ ಸ್ವದೇಶಿ ನಿರ್ಮಿತವಾಗಿದ್ದು, ಇದು ಸೈನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದರು.
ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಆರ್ ಆ್ಯಂಡ್ ಡಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ. ಕಾಮತ್, ಜಿಟಿಆರ್‌ಇಯ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ವೇಮಗಲ್ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಇಂದು ಚಾಲನೆ
ಕೋಲಾರ: ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ನಿರ್ಮಿಸಿರುವ ಏರ್‌ಬಸ್ ಎಚ್ 125 ಲಘು ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ಮಂಗಳವಾರ ಸಂಜೆ ಚಾಲನೆ ಸಿಗಲಿದೆ.
ಈ ಘಟಕಕ್ಕೆ ಮುಂಬೈನಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ಅವರು ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಲಿದ್ದಾರೆ.
ವೇಮಗಲ್‌ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್ ವಾಟ್ರಿನ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್
ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ.
ಖಾಸಗಿ ವಲಯದ ಮೊದಲ ಘಟಕ:ಖಾಸಗಿ ವಲಯದಲ್ಲಿ ದೇಶದ ಮೊದಲ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದೆ. ಸ್ಥಳೀಯವಾಗಿ ಮತ್ತಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯನ್ನು ಈ ಭಾಗದ ಜನರು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.