ADVERTISEMENT

ನಟಿ ರಮ್ಯಾಗೆ ಅಶ್ಲೀಲ ಸಂದೇಶ, ಬೆದರಿಕೆ: ಐ.ಪಿ ವಿಳಾಸ ಪತ್ತೆ– ಆರೋಪಿಗಳಿಗೆ ನಡುಕ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 14:32 IST
Last Updated 5 ಆಗಸ್ಟ್ 2025, 14:32 IST
<div class="paragraphs"><p>ರಮ್ಯಾ</p></div>

ರಮ್ಯಾ

   

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರ ಹಾಗೂ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, 47 ಮಂದಿಯ ಐ.ಪಿ ವಿಳಾಸಗಳನ್ನು ಪತ್ತೆಹಚ್ಚಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 15 ಮಂದಿಯನ್ನು ಗುರುತಿಸಿದ್ದು, ಈ ಪೈಕಿ ನಾಲ್ವರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯಾ ಅವರಿಂದಲೂ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.

ADVERTISEMENT

ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿ ವಿವಿಧ ಜಿಲ್ಲೆಗಳಲ್ಲಿರುವ ಉಳಿದ ಖಾತೆದಾರರಿಗೆ ಹುಡುಕಾಟ ನಡೆಸಲಾಗುತ್ತಿದೆ. ನಗರದ ಹೊರವಲಯದಲ್ಲಿನ ಕೆಲವು ವ್ಯಕ್ತಿಗಳ ಖಾತೆಗಳಿಂದಲೂ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಗಿದೆ. ಕೆಲವರು ಕ್ಷಮೆ ಕೇಳಿದ್ದಾರೆ. ಮಾಹಿತಿ ಇಲ್ಲದೆ ಸಂದೇಶ ಮಾಡಿರುವುದಾಗಿ ಮತ್ತೆ ಕೆಲವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಇತರ ಆರು ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್‌ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿತ್ತು. ಜಾಮೀನಿನ ಮೇಲಿನ ಆದೇಶವನ್ನು ಕಾಯ್ದಿರಿಸಿದೆ. ಈ ಬೆಳವಣಿಗೆಯ ನಂತರ ರಮ್ಯಾ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿ ‘ಭಾರತದ ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್‌ ಒಂದು ಭರವಸೆಯ ಕಿರಣ ಇದ್ದಂತೆ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ’ ಎಂದು ಅದರಲ್ಲಿ ಉಲ್ಲೇಖಿಸಿದ್ದರು.

ರಮ್ಯಾ ಅವರು ಈ ಪೋಸ್ಟ್‌ ಹಾಕಿದ ಬಳಿಕ ಅವರ ಇನ್‌ಸ್ಟಾಗ್ರಾಂ ಖಾತೆಗಳಿಗೆ ಅವಹೇಳನಕಾರಿ ಸಂದೇಶಗಳು ಬಂದಿದ್ದವು. ಸಂದೇಶಗಳ ಸ್ಕ್ರೀನ್‌ಶಾಟ್‌ ಅನ್ನು ರಮ್ಯಾ ತೆಗೆದುಕೊಂಡು ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.