ADVERTISEMENT

ವಿಧಾನಸೌಧ ಸುತ್ತಬೇಡಿ, ಕ್ರಿಯಾಯೋಜನೆ ರೂಪಿಸಿಕೊಳ್ಳಿ: ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:33 IST
Last Updated 17 ಡಿಸೆಂಬರ್ 2025, 15:33 IST
ಅಖಿಲ ಕರ್ನಾಟಕ ವೃತ್ತಿ ನಾಟಕ ಕಂಪನಿ ಸಮಗ್ರ ಕಲಾವಿದರ ಒಕ್ಕೂಟವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬುಧವಾರ ಉದ್ಘಾಟಿಸಿದರು. ಮಾಲತಿ ಸುಧೀರ್, ಶ್ರೀನಿವಾಸ್ ಜಿ. ಕಪ್ಪಣ್ಣ, ಎಲ್.ಬಿ. ಶೇಖ್ ಮಾಸ್ತರ, ಚಿಂದೋಡಿ ಬಂಗಾರೇಶ್‌, ಬಲವಂತರಾವ್ ಪಾಟೀಲ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ವೃತ್ತಿ ನಾಟಕ ಕಂಪನಿ ಸಮಗ್ರ ಕಲಾವಿದರ ಒಕ್ಕೂಟವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬುಧವಾರ ಉದ್ಘಾಟಿಸಿದರು. ಮಾಲತಿ ಸುಧೀರ್, ಶ್ರೀನಿವಾಸ್ ಜಿ. ಕಪ್ಪಣ್ಣ, ಎಲ್.ಬಿ. ಶೇಖ್ ಮಾಸ್ತರ, ಚಿಂದೋಡಿ ಬಂಗಾರೇಶ್‌, ಬಲವಂತರಾವ್ ಪಾಟೀಲ ಉಪಸ್ಥಿತರಿದ್ದರು.   

ಬೆಂಗಳೂರು: ’ವೃತ್ತಿ ರಂಗಭೂಮಿ ಕಲಾವಿದರು ಸೌಲಭ್ಯಗಳಿಗಾಗಿ ವಿಧಾನಸೌಧ ಸುತ್ತುವ ಬದಲು ಪ್ರತ್ಯೇಕ ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.

ಅಖಿಲ ಕರ್ನಾಟಕ ವೃತ್ತಿ ನಾಟಕ ಕಂಪನಿ ಸಮಗ್ರ ಕಲಾವಿದರ ಒಕ್ಕೂಟವನ್ನು ಬುಧವಾರ ನಗರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ‘ನಮಗೆ ಇಂತದೇ ಸೌಲಭ್ಯ ಸಿಗಬೇಕು ಎಂದು ಬೇಡಿಕೆ ಇಟ್ಟುಕೊಂಡು ಹೋದರೆ ಯಾವುದೇ ಕೆಲಸ ಆಗುವುದಿಲ್ಲ. ಆದರೆ ಸರ್ಕಾರ ರೂಪಿಸಿರುವ ಯೋಜನೆಗಳಲ್ಲಿ ಕಲಾವಿದರು ಯಾವುದನ್ನು ಪಡೆಯಬಹುದು, ಅದಕ್ಕೆ ಏನೇನು ಬೇಕು ಎನ್ನುವ ಕ್ರಿಯಾಯೋಜನೆ ರೂಪಿಸಿಕೊಳ್ಳಿ’ ಎಂದು ಹೇಳಿದರು.

‘ವಿಧಾನಸೌಧದಲ್ಲಿ ಸುಮ್ಮನೇ ಹೋಗಿ ಕೇಳಿದರೆ ನಿಮಗೆ ಏನೂ ಆಗುವುದಿಲ್ಲ. ಆಡಳಿತ ಎನ್ನುವುದು ಹಾಗೆಯೇ ಇರುತ್ತದೆ. ಆದರೆ ನಮ್ಮ ಗುರಿಯು ಅದನ್ನು ಪಡೆದುಕೊಳ್ಳುವ ರೀತಿ ಇರಬೇಕು. ಸರ್ಕಾರವೂ ಕಲಾವಿದರ ಪರವಾಗಿ ಕ್ರಿಯಾಯೋಜನೆ ರೂಪಿಸಿ ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ರಾಜಕಾರಣಿಗಳು ಮತಕ್ಕಾಗಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಬಹುದು. ಆದರೆ ಮನರಂಜನೆ, ಕಲೆ ಹೆಸರಲ್ಲಿ ಕಲಾವಿದರು ಶತಮಾನಗಳಿಂದ ಜನರನ್ನು ಬೆಸೆಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಂಗಭೂಮಿ ಜಾತ್ಯತೀತವಾದದ್ದು. ಇಲ್ಲಿ ಮೇಲು–ಕೀಳು ಎನ್ನುವುದಿಲ್ಲ. ಪ್ರತಿಭೆಗಳನ್ನು ರಂಗಭೂಮಿ ಸೃಷ್ಟಿಸಿದೆ. ರಾಜಕುಮಾರ್‌, ನರಸಿಂಹರಾಜು, ಜಿ.ವಿ.ಅಯ್ಯರ್‌ ಮೊದಲಾದವರು ಬೆಳೆದಿದ್ದು ವೃತ್ತಿ ರಂಗಭೂಮಿಯಿಂದಲೇ’ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ‘ಮಧ್ಯವರ್ತಿಗಳ ಕಾಟ ರಂಗಭೂಮಿ ಕಲಾವಿದರಿಗೂ ಇದೆ. ವಿಧಾನಸೌಧದಲ್ಲಿ ಏನಾದರೂ ಕೇಳಲು ಹೋದರೆ ನೂರಾರು ಮಂದಿ ಮಧ್ಯವರ್ತಿಗಳು ಅಡ್ಡಿಯಾಗುತ್ತಾರೆ. ಆದರೆ, ಜವಾಬ್ದಾರಿ ವಹಿಸಿಕೊಂಡು ಸಂಬಂಧಪಟ್ಟವರನ್ನು ಭೇಟಿ ಮಾಡಿದರೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು’ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ್‌ ಮಾಸ್ತರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ, ಒಕ್ಕೂಟದ  ಉಪಾಧ್ಯಕ್ಷೆ ಮಾಲತಿ ಸುಧೀರ್‌, ಕಾರ್ಯದರ್ಶಿ ಪಿ.ಆರ್‌.ರಾಜು ಉಪಸ್ಥಿತರಿದ್ದರು. ಕಲಾವಿದೆ ಜಿ.ವಿ.ಶಾರದಮ್ಮ ಅವರನ್ನು ಸನ್ಮಾನಿಸಲಾಯಿತು.

ವೃತ್ತಿ ರಂಗಭೂಮಿ ಕಲಾವಿದರ ಹಿರಿತನ ಆಧರಿಸಿ ಪ್ರಶಸ್ತಿ ಮಾಸಾಶನ ನೀಡಬೇಕು. ವೈದ್ಯಕೀಯ ಸೌಲಭ್ಯವನ್ನು ಎಲ್ಲರಿಗೂ ಒದಗಿಸಬೇಕು. ಇದಕ್ಕಾಗಿಯೇ ಮಾಲೀಕರು ಕಲಾವಿದರು ಸೇರಿ ಒಕ್ಕೂಟ ರಚಿಸಿದ್ದೇವೆ.
ಚಿಂದೋಡಿ ಬಂಗಾರೇಶ್ ಅಧ್ಯಕ್ಷ ಅಖಿಲ ಕರ್ನಾಟಕ ವೃತ್ತಿ ನಾಟಕ ಕಂಪನಿ ಸಮಗ್ರ ಕಲಾವಿದರ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.