ನ್ಯಾಯಾಲಯ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಳ್ಳಾರಿಯ ಚಿನ್ನದ ವ್ಯಾಪಾರಿ ಸಾಹಿಲ್ ಜೈನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ್ ಚನ್ನಬಸಪ್ಪ ಗೌಡರ್, ಪ್ರಕರಣದ ಮೂರನೇ ಆರೋಪಿಯು ಬಿಎನ್‌ಎಸ್ ಸೆಕ್ಷನ್ 480 ಅಡಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಡಿಆರ್‌ಐ ಪರ ವಾದ ಮಂಡಿಸಿದ ವಕೀಲರು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದು, ಸಾಹಿಲ್ ಜೈನ್‌ಗೆ ಜಾಮೀನು ನೀಡಬಾರದು ಎಂದು ಕೋರಿದ್ದರು. ಆದೇಶವನ್ನು ಮಂಗಳವಾರ ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದ್ದರು.
‘ಜನವರಿ ಮತ್ತು ಫೆಬ್ರುವರಿಯಲ್ಲಿ ಕ್ರಮವಾಗಿ₹ 11 ಕೋಟಿ ಮತ್ತು ₹11.25 ಕೋಟಿಗಳನ್ನು ಹವಾಲಾ ಮಾರ್ಗದ ಮೂಲಕ ದುಬೈಗೆ ವರ್ಗಾಯಿಸಲು ಹಾಗೂ ₹40.13 ಕೋಟಿ ಮೌಲ್ಯದ 49 ಕೆ.ಜಿ. ಚಿನ್ನವನ್ನು ವಿಲೇವಾರಿ ಮಾಡಲು ರನ್ಯಾಗೆ ಜೈನ್ ಸಹಾಯ ಮಾಡಿದ್ದಾರೆ. ಪ್ರತಿ ವಹಿವಾಟಿಗೆ ₹55 ಸಾವಿರಗಳನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ’ ಎಂದು ಡಿಆರ್‌ಐ ಆರೋಪಿಸಿದೆ.
ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಆರೋಪದ ಅಡಿ ನಟಿ ರನ್ಯಾ ರಾವ್ ಅವರನ್ನು ರೆವಿನ್ಯೂ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದರು. ರನ್ಯಾ ಅವರು ತಂದಿದ್ದ ಚಿನ್ನವನ್ನು ಖರೀದಿಸಿದ ಆರೋಪದಡಿ ಸಾಹಿಲ್ ಅವರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು.
ರನ್ಯಾ ಹೇಳಿಕೆ ಪಡೆಯಲು ಮನವಿ: ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರನ್ಯಾ ರಾವ್ ಅವರ ಹೇಳಿಕೆಯನ್ನು ಏಪ್ರಿಲ್ 18 ಮತ್ತು 19ರಂದು ಪಡೆಯಲು ಅನುಮತಿ ಕೋರಿ ಡಿಆರ್‌ಐ ಪರ ವಕೀಲರು ವಿಶೇಷ ನ್ಯಾಯಾಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದರು.
ಆಕ್ಷೇಪಣೆ ಸಲ್ಲಿಸುವಂತೆ ರನ್ಯಾ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.