ADVERTISEMENT

ಆರು ವರ್ಷದ ಮಗು‌ ಮೇಲೆ ಅತ್ಯಾಚಾರ ಎಸಗಿ ಕೊಲೆ: ಬಿಹಾರದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 4:04 IST
Last Updated 14 ಜನವರಿ 2025, 4:04 IST
   

ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾವಣೆಯೊಂದ ರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಆರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ.

ಕೃತ್ಯ ಎಸಗಿದ ಆರೋಪಿ, ಬಿಹಾರದ ಅಭಿಷೇಕ್‌ ಕುಮಾರ್‌(25)ನನ್ನು ರಾಮಮೂರ್ತಿ ನಗರ ಠಾಣೆಯ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ .

ನೇಪಾಳದ ದಂಪತಿ ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಮೃತ ಬಾಲಕಿಯ ತಾಯಿ ಮನೆಗೆಲಸ ಮಾಡುತ್ತಿದ್ದರೆ, ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

ADVERTISEMENT

‘ಸೋಮವಾರ ಸಂಜೆ ಕೆಲಸದ ನಿಮಿತ್ತ ದಂಪತಿ ಮನೆಯಿಂದ ಹೊರಕ್ಕೆ ಹೋಗಿದ್ದರು. ಹೆಣ್ಣು ಮಗು ಮನೆಯಲ್ಲೇ ಆಟವಾಡುತ್ತಿತ್ತು. ಮನೆಯ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡದಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಹೆಣ್ಣು ಮಗುವೊಂದೇ ಇರುವುದನ್ನು ಗಮನಿಸಿ, ಪುಸಲಾಯಿಸಿ ನಿರ್ಮಾಣ ಹಂತದ‌ ಕಟ್ಟಡಕ್ಕೆ ಕರೆದೊಯ್ದಿದ್ದ. ಬಳಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

ಪೋಷಕರು ಹುಡುಕಾಟ ನಡೆಸಿದಾಗ ಕೊನೆಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ನೋಡಿದಾಗ ಮಗುವಿನ ಶವ ಪತ್ತೆಯಾಗಿತ್ತು. ಸ್ಥಳೀಯರು ಆರೋಪಿ ಯನ್ನು ಥಳಿಸಿ ರಾಮಮೂರ್ತಿ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಬಿಹಾರದಿಂದ ಐದು ವರ್ಷದ ಹಿಂದೆ ಆರೋಪಿ ನಗರಕ್ಕೆ ಬಂದಿದ್ದ. ಗಾರೆ ಕೆಲಸ ಮಾಡುತ್ತಿದ್ದ. ಮೂರು ದಿನಗಳ ಹಿಂದಷ್ಟೇ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಕ್ಕೆ ಕೆಲಸಕ್ಕೆ ಬಂದಿದ್ದ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರ ಪ್ರತಿಭಟನೆ:

‘ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು. ನಮ್ಮ ಕುಟುಂಬಕ್ಕೆ ನ್ಯಾಯ ಕಲ್ಪಿಸಿ’ ಎಂದು ಮಗುವಿನ ತಾಯಿ ಆಗ್ರಹಿಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಸಂಜೆಯೂ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸೂಕ್ತ ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ಆಗುವಂತೆ ಮಾಡಲಾಗುವುದು. ಎಂದು ಪೊಲೀಸರು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಿದರು.

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ತೋರಣಗಲ್ಲು( ಬಳ್ಳಾರಿ): ಸಂಡೂರು ತಾಲ್ಲೂಕಿನ ತೋರಣಗಲ್‌ನಲ್ಲಿ 5 ವರ್ಷದ ಬಾಲಕಿ ಮೇಲೆ ಸೋಮವಾರ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ.

ಆರೋಪಿ ಪತ್ತೆಗೆ ಶೋಧ ನಡೆದಿದೆ. ಆತನವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾರ್ಖಾನೆ ಕೆಲಸಕ್ಕೆಂದು 10 ವರ್ಷದ ಹಿಂದೆ ತೋರಣಗಲ್ಲಿಗೆ ಉತ್ತರ ಭಾರತ ದಂಪತಿ ಬಂದಿದ್ದರು. ಇವರ ಪುತ್ರಿ, ಬಾಲಕಿ ಸೋಮವಾರ ಮನೆ ಬಳಿ ಆಟವಾಡುತ್ತಿದ್ದಾಗ ಪುಸಲಾಯಿಸಿ ಬೇರೆಡೆ ಕರೆದೊಯ್ದು ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.